

ನವದೆಹಲಿ: ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧದ ಆರೋಪಗಳ ಕುರಿತು ಕೇಂದ್ರದಿಂದ ನೇಮಕಗೊಂಡ ಏಕಸದಸ್ಯ ಸಮಿತಿಯು ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ವರದಿ ಸಲ್ಲಿಸಲಾಗಿದೆ.
2023ರ ಬ್ಯಾಚ್ ಟ್ರೈನಿ ಐಎಎಸ್ ಪೂಜಾ ಕೇಡ್ಕರ್ ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ಅವಧಿಯಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು ಆಕೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದೇ ಹಿನ್ನೆಲೆಯಲ್ಲಿ ಯುಪಿಎಸ್‌ಸಿ ತನಿಖೆ ನಡೆಸಿ, ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಆಕೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ತೀರ್ಮಾನಕ್ಕೆ ಬಂದಿತ್ತು. ಖೇಡ್ಕರ್ ಅವರ ಐಎಎಸ್ ಆಯ್ಕೆಯನ್ನು ರದ್ದುಪಡಿಸಿ ಮತ್ತು ಮುಂದಿನ ಪರೀಕ್ಷೆಗಳಿಂದ ಅವರನ್ನು ಡಿಬಾರ್ ಮಾಡಿ ನೋಟಿಸ್ ಜಾರಿ ಮಾಡಿದೆ.
ಖೇಡ್ಕರ್ ಅವರ ತಂದೆ ಮಹಾರಾಷ್ಟ್ರ ಸರ್ಕಾರದ ಮಾಜಿ ಸರ್ಕಾರಿ ಅಧಿಕಾರಿ ದಿಲೀಪ್ ಖೇಡ್ಕರ್ ಕೂಡ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿದ್ದಾರೆ. ಇನ್ನು ಗ್ರಾಪಂ ಅಧ್ಯಕ್ಷೆಯಾಗಿರುವ ಖೇಡ್ಕರ್ ತಾಯಿ ಮನೋರಮಾ ಕೂಡ ಜನರಿಗೆ ಗನ್ ತೋರಿಸಿ ಬೆದರಿಸುತ್ತಿರುವ ವಿಡಿಯೋ ಬೆಳಕಿಗೆ ಬಂದ ನಂತರ ಪೊಲೀಸರು ಆಕೆಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿದ್ದಾರೆ.