ಒಂಬತ್ತು ರಾಜ್ಯಗಳಿಗೆ ರಾಜ್ಯಪಾಲರ ನೇಮಕ..ಆರ್ವರು ಹೊಸಬರು- ಮೂರು ಕಡೆ ಪುನರ್ರಚನೆ

murmu
Published on

ನವದೆಹಲಿ: ಕೇಂದ್ರ 9 ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿದ್ದು, ಇವರಲ್ಲಿ 6 ಮಂದಿ ಹೊಸದಾಗಿ ನೇಮಕಗೊಂಡಿದ್ದಾರೆ. ಮೂವರನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಅಧ್ಯಕ್ಷೆ ದ್ರೌಪದಿ ಮುರ್ಮು ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ನಾಯಕ ಸಂತೋಷ್ ಗಂಗ್ವಾರ್ ಅವರನ್ನು ಜಾರ್ಖಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅಸ್ಸಾಂನ ಮಾಜಿ ಲೋಕಸಭಾ ಸಂಸದ ರಾಮೆನ್ ಡೆಕಾ ಅವರನ್ನು ಛತ್ತೀಸ್‌ಗಢಕ್ಕೆ, ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಹರಿಭಾವು ಕಿಶನ್​ರಾವ್ ಬಾಗ್ಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

ಅದೇ ರೀತಿ ತ್ರಿಪುರಾದ ಮಾಜಿ ಉಪ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಜಸ್ಥಾನದ ಹಿರಿಯ ಬಿಜೆಪಿ ನಾಯಕ ಒ.ಪಿ. ಮಾಥುರ್ ಸಿಕ್ಕಿಂ ರಾಜ್ಯಪಾಲರಾಗಿದ್ದು, ಕರ್ನಾಟಕದ ಮಾಜಿ ಎಂಪಿ ಸಿ.ಎಚ್.ವಿಜಯ್ಶಂಕರ್ ಮೇಘಾಲಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ ಕೈಲಾಶನಾಥನ್ ರನ್ನು ಪಾಂಡಿಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ.

ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ತೆಲಂಗಾಣ ಹೆಚ್ಚುವರಿ ಉಸ್ತುವಾರಿ ವಹಿಸಿದ್ದರು, ಅವರು ಪ್ರಸ್ತುತ ರಮೇಶ್ ಬೈಸ್ ಅವರ ಉತ್ತರಾಧಿಕಾರಿಯಾಗಿ ಮಹಾರಾಷ್ಟ್ರದ ಹೊಸ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.

ಅಸ್ಸಾಂನ ರಾಜ್ಯಪಾಲರಾದ ಗುಲಾಬ್ ಚಂದ್ ಕಟಾರಿಯಾ ಅವರನ್ನು ಪಂಜಾಬ್‌ನ ರಾಜ್ಯಪಾಲರಾಗಿ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕ ಕಟಾರಿಯಾ ಈ ಹಿಂದೆ ರಾಜಸ್ಥಾನದಲ್ಲಿ ಸಚಿವರಾಗಿದ್ದರು.

ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಮತ್ತು ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.

ಈ ನೇಮಕಾತಿಗಳು ಅವರು ತಮ್ಮ ಕಚೇರಿಗಳ ಉಸ್ತುವಾರಿ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುತ್ತವೆ ಎಂದು ಆದೇಶದಲ್ಲಿ ರಾಷ್ಟ್ರಪತಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net