

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಪ್ರಸ್ತಾವನೆಗಳಲ್ಲಿ ಒಂದಾದ "ಒಂದು ದೇಶ ಒಂದು ಚುನಾವಣೆ"ಯನ್ನು ಕಾರ್ಯರೂಪಕ್ಕೆ ತರಲು ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮತಿಯನ್ನು ರಚನೆ ಮಾಡಿದೆ.
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು ಇದರ ಉದ್ದೇಶವಾಗಿದೆ. ಇದರ ಸಾಧಕ-ಬಾದಕಗಳನ್ನು ಅಧ್ಯಯನ ಮಾಡಲು ಈ ಸಮಿತಿಯನ್ನು ರಚಿಸಲಾಗಿದೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ 18ರಿಂದ 22ರವರೆಗೆ ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಸಮಿತಿಯಲ್ಲಿ ಸದಸ್ಯರು ಯಾರೆಲ್ಲ ಇರಲಿದ್ದಾರೆ ಎಂಬುದರ ನೋಟಿಫಿಕೇಶನ್ ಮುಂದಿನ ದಿನಗಳಲ್ಲಿ ಹೊರಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಮಿತಿಯ ಸ್ಥಾಪನೆಯು ಅವಧಿ ಪೂರ್ವವಾಗಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆಯನ್ನು ಹುಟ್ಟು ಹಾಕಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳೊಂದಿಗೆ ಲೋಕಸಭಾ ಚುನಾವಣೆ ಸಹ ನಡೆಯಬಹುದು ಎಂದು ಹೇಳಲಾಗುತ್ತಿದೆ.
ರಾಮನಾಥ್ ಕೋವಿಂದ್ ಅವರು ತಜ್ಞರೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಮತ್ತು ಈ ವಿಷಯದ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಸಹ ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 'ಒಂದು ರಾಷ್ಟ್ರ ಒಂದು ಚುನಾವಣೆ' ಬಗ್ಗೆ ನಿರಂತರವಾಗಿ ಪ್ರಸ್ತಾಪ ಮಾಡುತ್ತಲೇ ಬರುತ್ತಿದ್ದಾರೆ. ನಿರಂತರ ಚುನಾವಣೆಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆ ಮತ್ತು ಚುನಾವಣೆಯ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆಗುತ್ತಿರುವ ಅಡಚಣೆ ತಪ್ಪಿಸಲು ಈ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದರು.
ಸೆ. 18ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಮೊದಲ ವಿಶೇಷ ಅಧಿವೇಶನವಾಗಿದೆ. 2017ರಲ್ಲಿ ಜಿಎಸ್ಟಿ ಜಾರಿಗೆ ತರಲು ಲೋಕಸಭಾ ಮತ್ತು ರಾಜ್ಯಸಭೆ ಎರಡರಲ್ಲೂ ಮಧ್ಯರಾತ್ರಿಯವರೆಗೂ ವಿಶೇಷ ಜಂಟಿ ಅಧಿವೇಶನ ನಡೆದಿತ್ತು. ಆದರೆ, ಈ ಬಾರಿ ಸತತ ಐದು ದಿನಗಳವರೆಗೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಹೀಗಾಗಿ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)