Himachal Pradeshದ ಅಭಿವೃದ್ದಿಯ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ : ಸಂಸದೆ ಪ್ರಿಯಾಂಕಾ ಗಾಂಧಿ

Priyanka Gandhi
Published on

Himachal Pradesh: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ (ಅಕ್ಟೋಬರ್ 13) ವಾಗ್ದಾಳಿ ನಡೆಸಿದ್ದಾರೆ.

ಶಿಮ್ಲಾದ ರಿಡ್ಜ್ ಮೈದಾನದಲ್ಲಿರುವ ದೌಲತ್ ಸಿಂಗ್ ಪಾರ್ಕ್‌ನಲ್ಲಿ ನಡೆದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ತಾಯಿ ಸೋನಿಯಾ ಗಾಂಧಿಯೊಂದಿಗೆ ಭಾಗವಹಿಸಿ ಮಾತನಾಡಿದ ಪ್ರಿಯಾಂಕ, ಸರ್ಕಾರದ ನೀತಿಗಳನ್ನು ಟೀಕಿಸಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ದಿಯ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ, ಇತ್ತೀಚೆಗೆ ಪ್ರವಾಹದಂತಹ ವಿಪತ್ತು ಎದುರಾಗಿದ್ದರಿಂದ ರಾಜ್ಯದಲ್ಲಿ ಹಲವಾರು ಕುಟುಂಬಗಳು ಸ್ಥಳಾಂತರಗೊಂಡಿವೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈ ವಿಷಯವಾಗಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಪದೇ ಪದೇ ಕೇಂದ್ರಕ್ಕೆ ಮನವಿ ಮಾಡಿದರೂ ಯಾವುದೇ ನೆರವನ್ನು ನೀಡುತ್ತಿಲ್ಲ ಎಂದರು.

ಸಿಎಂ ಸುಖು, ಸಂತ್ರಸ್ತ ಕುಟುಂಬಗಳಿಗೆ ವೈಯಕ್ತಿಕವಾಗಿ ಸಹಾಯ ಹಸ್ತಚಾಚಿದ್ದು, ಬಿಜೆಪಿ ಸರ್ಕಾರಕ್ಕೆ ಜನರ ಅಭಿವೃದ್ದಿಗಿಂತ, ರಾಜಕೀಯ ಮಾಡುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದರು.

ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ವೀರಭದ್ರ ಸಿಂಗ್ ಅವರಂತಹ ನಾಯಕರು ಇರಬೇಕು, ಇಂತಹ ಗಣ್ಯರು ಯಾವಾಗಲೂ ಪ್ರಾಮಾಣಿಕತೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುತ್ತಿದ್ದರು ಮತ್ತು ಜನರ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಹೇಳಿದರು. ದುರದೃಷ್ಟವಶಾತ್, ಸದ್ಯ ದೇಶದಲ್ಲಿ ಈ ಮಾರ್ಗವನ್ನು ಅನುಸರಿಸುವ ಕೆಲವೇ ನಾಯಕರಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ ಜನರ ಸಮಸ್ಯೆಗಳ ಬಗ್ಗೆ ನಿರ್ಭಯವಾಗಿ ಧ್ವನಿ ಎತ್ತುತ್ತಾರೆ. ಜನರಿಗಾಗಿ ಕೆಲಸ ಮಾಡುವ ನಾಯಕರು, ಸಾಮಾಜಿಕ ಜಾಲತಾಣಗಳನ್ನು ಮತ್ತು ಪಿಆರ್ ಅನ್ನು ಮೀರಿ ಹೋಗಬೇಕು ಎಂದರು.

ವೀರಭದ್ರ ಸಿಂಗ್​ರ ಆರು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಹಿಮಾಚಲ ಪ್ರದೇಶದ ಮೊದಲ ಮುಖ್ಯಮಂತ್ರಿ ವೈಎಸ್ ಪರ್ಮಾರ್, ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಗಳ ಬಳಿ ಪ್ರತಿಷ್ಟಾಪಿಸಲಾಗಿದೆ.

ರಾಜ್ಯಕ್ಕೆ ವೀರಭದ್ರ ಸಿಂಗ್​ ಕೊಡುಗೆ ಅಪಾರ...

ದಿವಂಗತ ವೀರಭದ್ರ ಸಿಂಗ್ ಹೃದಯ ಯಾವಾಗಲೂ ಹಿಮಾಚಲ ಪ್ರದೇಶದ ಅಭಿವೃದ್ದಿಗಾಗಿ ಮಿಡಿಯುತ್ತಿತ್ತು, ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆಂದು ಇಲ್ಲಿಗೆ ಬಂದಾಗ, ವೀರಭದ್ರ ಸಿಂಗ್​ರ ಜನರೊಂದಿಗಿನ ಸಂಪರ್ಕ ಮತ್ತು ಅವರ ಸರಳ ನಡವಳಿಕೆಯ ಸ್ಮರಿಸಿಕೊಳ್ಳುತಿದ್ದರು ಎಂದು ಹೇಳಿದರು. ನಮ್ಮ ಪೂರ್ವಜರ ಕನಸನ್ನು ನನಸಾಗಿಸಲು ಕಾಂಗ್ರೆಸ್ ಪಕ್ಷ ಯಾವಾಗಲೂ ಪ್ರಯತ್ನಿಸುತ್ತದೆ, ರಾಷ್ಟ್ರದ ಅಭಿವೃದ್ಧಿಗೆ ಸರಿಯಾದ ಮನಸ್ಥಿತಿ ಮತ್ತು ಪ್ರಾಮಾಣಿಕ ರಾಜಕೀಯ ನಿರ್ಣಾಯಕವಾಗಿದೆ ಎಂದರು.

ಈ ಮಾನ್ಸೂನ್‌ನಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 47 ಮೇಘಸ್ಫೋಟಗಳು, 98 ದಿಢೀರ್ ಪ್ರವಾಹಗಳು ಮತ್ತು 148 ಪ್ರಮುಖ ಭೂಕುಸಿತಗಳು ವರದಿಯಾಗಿವೆ, ಮಳೆ ಸಂಬಂಧಿತ ಘಟನೆಗಳಲ್ಲಿ 270 ಜನರು ಸಾವನ್ನಪ್ಪಿದ್ದಾರೆ. ಒಟ್ಟು ನಷ್ಟವು 5,426 ಕೋಟಿ ರೂ. ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net