ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಅಜಂ ಖಾನ್​​ಗೆ ವೈ ಕೆಟಗರಿ ಭದ್ರತೆ ನೀಡಿದ ಯುಪಿ ಸರ್ಕಾರ | Azam Khan

ವಿಜಯವಾಣಿ (36)
Published on

Azam Khan: ಕ್ರಿಮಿನಲ್​ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದು, ಕೆಳದ ತಿಂಗಳು ಸೆ. 23ರಂದು ಸೀತಾಪುರ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಸ್​ಪಿ ನಾಯಕ ಮತ್ತು ಮಾಜಿ ಸಚಿವ ಅಜಂ ಖಾನ್​ ಅವರಿಗೆ ಯುಪಿ ಸರ್ಕಾರ ಶನಿವಾರ ಪುನಃ ವೈ ಕೆಟಗರಿ ಭದ್ರತೆ ನೀಡಿದೆ ಎಂದು ಸೋಮವಾರ(ಅ. 13) ವರದಿಯಾಗಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಅಜಂ ಖಾನ್​ ಅವರನ್ನು ನ್ಯಾಯಾಲಯವೂ ದೋಷಿ ಎಂದು ತೀರ್ಪು ನೀಡಿದ ಬಳಿಕ ರಾಜ್ಯ ವಿಧಾನಸಭೆಯಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಬಳಿಕ ಅವರಿಗೆ ನೀಡಿದ ಭದ್ರತೆ ಹಿಂಪಡೆಯಲಾಗಿತ್ತು.

ಇತ್ತೀಚೆಗೆ ಜಾಮೀನಿನ ಮೇಲೆ ಜೈಲ್​ನಿಂದ ಬಿಡುಗಡೆಯಾದ ಬಳಿಕ  ಅವರ ನಿವಾಸಕ್ಕೆ ನೂರಾರು ಜನ ಭೇಟಿ ಮಾಡಲು ಬರುತ್ತಿದ್ದಾರೆ. ಈ ಹಿನ್ನೆಲೆ ರಾಂಪುರದಲ್ಲಿ ಅವರ ರಾಜಕೀಯ ಪ್ರಭಾವ ಮತ್ತು ಉನ್ನತ ಸ್ಥಾನಮಾನವನ್ನು ಪರಿಗಣಿಸಿ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಂಭವನೀಯ ಕಾಳಜಿ ಹಿನ್ನೆಲೆ ಅಧಿಕಾರಿಗಳು ವೈ ಕೆಟಗರಿ ಭದ್ರತೆ ನೀಡಿದ್ದಾರೆ.

ಶನಿವಾರ ಈ ಬಗ್ಗೆ ಉತ್ತರ ಪ್ರದೇಶ ಗೃಹ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಖಾನ್ ಅವರ ಭದ್ರತೆಯಲ್ಲಿ ಜಿಪ್ಸಿ ವಾಹನ ಮತ್ತು ಏಳು ಸಶಸ್ತ್ರ ಸಿಬ್ಬಂದಿಯನ್ನು ಅವರ ರಕ್ಷಣೆಗಾಗಿ ನಿಯೋಜಿಸಲಾಗಿದೆ. ಏಳು ಸಿಬ್ಬಂದಿಗಳಲ್ಲಿ ನಿವಾಸಕ್ಕೆ ನಾಲ್ವರು ಕಾವಲುಗಾರರನ್ನು ಹಾಕಲಾಗಿದ್ದು, ಮೂವರು ಸಿಬ್ಬಂದಿಯನ್ನು ಅವರೊಂದಿಗೆ ನೇಮಿಸಲಾಗಿದೆ.

ಅ. 8ರಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಸ್ವತಃ ರಾಂಪುರಕ್ಕೆ ಆಗಮಿಸಿ ಅಜಂ ಖಾನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಜೊತೆಗೆ ಖಾನ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ರಾಜಕೀಯ ದ್ವೇಷದಿಂದ ಕೂಡಿದ್ದು, ಮುಂದೆ ಎಸ್​ಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net