24 ಗಂಟೆಯಲ್ಲಿ 3900 ಕರೊನಾ ಪ್ರಕರಣಗಳು ಪತ್ತೆ; ಕೆಲವು ರಾಜ್ಯಗಳ ವಿರುದ್ಧ ಸಿಟ್ಟಾಗಿದೆ ಕೇಂದ್ರ ಸರ್ಕಾರ..!

Covid 19
Published on

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿನ ಪ್ರಸರಣ ಭಯ ಹುಟ್ಟಿಸುವ ರೀತಿಯಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 3900 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 46,433ಕ್ಕೆ ಏರಿದೆ.

ಈ ಮಧ್ಯೆ ಕರೊನಾ ಸೋಂಕಿತರ ಸಂಖ್ಯೆಯನ್ನು ಕೆಲವು ರಾಜ್ಯಗಳು ಸರಿಯಾಗಿ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಡೇಟಾ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಳೆದ 24ಗಂಟೆಯಲ್ಲಿ 3900 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗಿನ ಅತ್ಯಂತ ಹೆಚ್ಚು ಪ್ರಮಾಣ. ಹೀಗೇ ಏಕಾಏಕಿ ಸಂಖ್ಯೆ ಹೆಚ್ಚಾದಂತೆ ಕಾಣಲು ಕಾರಣ ಕೆಲವು ರಾಜ್ಯಗಳು. ಅವು ಸಮಯಕ್ಕೆ ಸರಿಯಾಗಿ ಅಂಕಿಸಂಖ್ಯೆಗಳನ್ನು ಒದಗಿಸುತ್ತಿಲ್ಲ.

ಆಯಾ ದಿನ ಕಾಣಿಸಿಕೊಂಡ ಪ್ರಕರಣಗಳನ್ನು ಸಮಯೋಚಿತವಾಗಿ ವರದಿ ಮಾಡುವುದು ತುಂಬ ಮುಖ್ಯ. ಆದರೆ ಕೆಲವು ರಾಜ್ಯಗಳು ಇದನ್ನು ಪಾಲಿಸುತ್ತಿಲ್ಲ. ತಡವಾಗಿ ನೀಡುತ್ತಿವೆ. ಹಾಗಾಗಿ ಟ್ಯಾಲಿ ಮಾಡಲು ಕಷ್ಟವಾಗಿದೆ. ಒಮ್ಮೆಲೇ ಸೋಂಕಿನ ಪ್ರಮಾಣ ಅಧಿಕವಾದಂತೆ ಭಾಸವಾಗುತ್ತದೆ. ನಿನ್ನೆಯಿಂದಲೂ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಕಾಣಲು ಇದೇ ಕಾರಣ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಡೇಟಾ ಅನ್ವಯ ಭಾರತದಲ್ಲಿ 32,138 ಸಕ್ರಿಯ ಕರೊನಾ ಪ್ರಕರಣಗಳು ಇವೆ. 24 ಗಂಟೆಯಲ್ಲಿ 195 ಮಂದಿ ಸಾವನ್ನಪ್ಪಿದ್ದು ಒಟ್ಟು ಮೃತರ ಸಂಖ್ಯೆ 1,568ಕ್ಕೆ ಏರಿದೆ. 12,726 ಜನ ಚೇತರಿಸಿಕೊಂಡು ಮನೆ ಸೇರಿದ್ದಾರೆ.

ಹಾಗೇ ಕರೊನಾದಿಂದ ಚೇತರಿಸಿಕೊಳ್ಳುವವರ ಪ್ರಮಾಣ ದೇಶದಲ್ಲಿ ಶೇ.24.41ಕ್ಕೆ ಏರಿದೆ ಎಂದು ಲವ ಅವರು ತಿಳಿಸಿದ್ದಾರೆ.

ಹಾಗೇ ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರ ಕೊಡಿ, ಲಾಕ್​ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಿ ಎಂದು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net