ಗೋಲ್‌ಮಾಲ್ ತನಿಖಾ ವರದಿ ಬಹಿರಂಗಕ್ಕೆ ಕಾಂಗ್ರೆಸ್ ಸದಸ್ಯರ ಆಗ್ರಹ

palike
Published on

ಶಿವಮೊಗ್ಗ: ನಗರದ ಬ್ಯಾರೀಸ್ ಸಿಟಿ ಸೆಂಟ್ರಲ್ ಮಾಲ್‌ನ ಗುತ್ತಿಗೆ ಅವಧಿಯನ್ನು 99 ವರ್ಷಗಳ ಅವಧಿಗೆ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದ ಬಗ್ಗೆ ನಡೆಸಿರುವ ತನಿಖೆಯ ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿ ನಗರ ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಗುರುವಾರ ನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಅವಧಿ ವಿಸ್ತರಣೆ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು. ಅನೇಕ ಸಂಘ ಸಂಸ್ಥೆಗಳು ಕೂಡಾ ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದವು. ಆದರೂ ಆಡಳಿತ ಪಕ್ಷವರು ಈ ವಿಚಾರವಾಗಿ ಗೌಪ್ಯತೆ ಕಾಯ್ದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಗುತ್ತಿಗೆ ಅವಧಿ ಮುಕ್ತಾಯಕ್ಕೆ ಮೂರು ತಿಂಗಳ ಮುನ್ನ ಈ ರೀತಿ ಅವಧಿ ನವೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಬಹುದು. ಅದರೆ ಗುತ್ತಿಗೆ ಅವಧಿ ಮುಕ್ತಾಯಕ್ಕೆ ಸಾಕಷ್ಟು ಸಮಯ ಇರುವಾಗಲೇ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಸೇರಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲು ಪಾಲಿಕೆಯ ಐವರು ಸದಸ್ಯರ ಸಮಿತಿ ರಚನೆ ಮಾಡಲಾಗಿತ್ತು. ಹಲವು ತಿಂಗಳು ಕಳೆದರೂ ಈ ಸಮಿತಿಯ ವರದಿ ಬಹಿರಂಗ ಮಾಡಿಲ್ಲ ಎಂದು ದೂರಿದರು.

ಪಾಲಿಕೆಯ ಕಾಂಗ್ರೆಸ್ ಸದಸ್ಯರ ನಿಯೋಗ ಮೇಯರ್ ಸುನೀತಾ ಅಣ್ಣಪ್ಪ ಅವರನ್ನು ಭೇಟಿಯಾಗಿ 22 ದಿನಗಳ ಹಿಂದೆಯೇ ವರದಿ ಬಹಿರಂಗಕ್ಕೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ವರದಿ ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರು.

ನಗರ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net