

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಕ್ಷೇತ್ರದ ಟಿಕೆಟ್ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂ. ಮೋಸ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಕೇಂದ್ರ ಎಸ್‌ಸಿ/ಎಸ್‌ಟಿ ಆಯೋಗ ಅಥವಾ ರೈಲ್ವೇ ಮಂಡಳಿಯಲ್ಲಿ ನಾಮ ನಿರ್ದೇಶಕ ಹುದ್ದೆ ಕೊಡಿಸುವುದಾಗಿ ಸಮಾಜಸೇವಕನಿಗೆ ಆಸೆ ತೋರಿಸಿ 31.40 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬಯಲಾಗಿದೆ.
ಬಾಬಾಸಾಹೇಬ್‌ಪಾಳ್ಯದ ನಿವಾಸಿ ಎಸ್. ಮುನಿಯಪ್ಪ ಎಂಬುವರು ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ದೆಹಲಿ ಮೂಲದ ಅನೂಪ್ ಚೌಧರಿ ಮತ್ತು ರಿಚ್ಮಂಡ್ ಸರ್ಕಲ್‌ನ ಸಬ್ ಪ್ಲೇಸ್ ಸ್‌ಟಾವೇರ್ ಟೆಕ್ನಾಲಜಿಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕಿ ಸರೀತಾ ಶೆಟ್ಟಿ ಎಂಬಾಕೆ ವಿರುದ್ಧ ಎ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2022ರ ಸರಿತಾ ಶಟ್ಟಿ ಎಂಬಾಕೆ ಪರಿಚಯವಾಗಿ ಕೇಂದ್ರ ಅಹಾರ ನಿಗಮದಲ್ಲಿ ನಾಮ ನಿರ್ದೇಶನ ಆಗಿರುವುದಾಗಿ ಹೇಳಿಕೊಂಡಿದ್ದಳು. ಆನಂತರ ನನಗೆ ದೆಹಲಿಯಲ್ಲಿ ಅನುಪ್ ಕುಮಾರ್ ಚೌಧರಿ ಎಂಬುವರು ಪರಿಚಯ ಇದ್ದಾರೆ. 30 ದಿನಗಳ ಒಳಗೆ 30 ಲಕ್ಷ ರೂ. ನಗದು ರೂಪದಲ್ಲಿ ಕೊಟ್ಟರೇ ನಿಮಗೆ ಎಸ್‌ಸಿ/ಎಸ್‌ಟಿ ಆಯೋಗ ಅಥವಾ ರೈಲ್ವೇ ಮಂಡಳಿಯಲ್ಲಿ ನಾಮ ನಿರ್ದೇಶಕ ಹುದ್ದೆ ಕೊಡಿಸುವುದಾಗಿ ಆಸೆ ಹುಟ್ಟಿಸಿದ್ದರು. ಅದರಂತೆ ಹಣ ಕೊಟ್ಟೇ. ಆದರೆ, ಹುದ್ದೆ ಕೊಡಿಸಲಿಲ್ಲ. ಕೊನೆಗೆ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ 8 ತಿಂಗಳಲ್ಲಿ 2 ಕಂತಿನಲ್ಲಿ ಸರೀತಾ ಶೆಟ್ಟಿ, 30 ಲಕ್ಷ ರೂ. ವಾಪಸ್ ನೀಡಿದರು ಎಂದು ಮುನಿಯಪ್ಪ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಬಳಿಕ ಮತ್ತೆ ಸರಿತಾ ಶೆಟ್ಟಿ ಕರೆ ಮಾಡಿ ಅನೂಪ್ ಶೆಟ್ಟಿಯನ್ನು ಪರಿಚಯ ಮಾಡಿಸುತ್ತೆನೆ ಬನ್ನಿ ಎಂದು ದೆಹಲಿಗೆ ಕರೆದುಕೊಂಡು ಹೋದರು. ಪಂಚತಾರಾ ಹೋಟೆಲ್‌ನಲ್ಲಿ ಅನೂಪ್‌ನ್ನು ಭೇಟಿ ಮಾಡಿಸಿ 50 ಲಕ್ಷ ರೂ. ಕೊಟ್ಟಲ್ಲಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದರು. ಆಸೆಯಿಂದ ಹಂತ ಹಂತವಾಗಿ ಆರ್‌ಟಿಜಿಎಸ್, ನಗದು ಮತ್ತು ವ್ಯಾಲೆಟ್‌ನಲ್ಲಿ 31.40 ಲಕ್ಷ ರೂ. ಕೊಟ್ಟಿದ್ದೆನೆ. ಆದರೆ, ನನಗೆ ಯಾವುದೇ ನಾಮ ನಿರ್ದೇಶಕ ಹುದ್ದೆ ಕೊಡಿಸಲಿಲ್ಲ. ಹಣ ವಾಪಸ್ ಕೇಳಿದರೇ ಬೆದರಿಕೆ ಒಡ್ಡುತ್ತಿದ್ದಾರೆ. ಅನೂಪ್ ಕುಮಾರ್ ಚೌದರಿ ಮತ್ತು ಸರೀತಾ ಶೆಟ್ಟಿ ಸಂಚು ರೂಪಿಸಿ ಮೋಸ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮುನಿಯಪ್ಪ ಒತ್ತಾಯ ಮಾಡಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.