

ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ನಗರದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಧ್ಯ ಕರ್ನಾಟಕದ ಮೊಟ್ಟಮೊದಲ ತಾಯಂದಿರ ಎದೆಹಾಲು ಬ್ಯಾಂಕ್ ಕಾರ್ಯಾರಂಭಗೊಳ್ಳಲಿದೆ.
ಎನ್‌ಐಸಿಯುನಲ್ಲಿ ದಾಖಲಾದ 800, 1000, 1250 ಗ್ರಾಂ ತೂಕವಿರುವ ಮಕ್ಕಳಿಗೆ ಹಾಲಿನ ಅವಶ್ಯಕತೆ ತುಂಬಾ ಇದೆ. ಅಂತಹ ಮಕ್ಕಳಿಗೆ ತಾಯಿ ಹಾಲು ಕೊಟ್ಟರೆ ಮರು ಜೀವ ಕೊಟ್ಟಂತೆ ಎಂದು ಸರ್ಜಿ ಆಸ್ಪತ್ರೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಡೀ ವಿಶ್ವದ 66 ರಾಷ್ಟ್ರಗಳಲ್ಲಿ ಒಟ್ಟಾರೆ 756 ಮಿಲ್ಕ್ ಬ್ಯಾಂಕ್‌ಗಳಿದ್ದರೆ, ಈ ಪೈಕಿ ಬ್ರೆಜಿಲ್‌ನಲ್ಲೇ 256 ಮಿಲ್ಕ್ ಬ್ಯಾಂಕ್‌ಗಳಿವೆ. 2022ರ ಮಾಹಿತಿಯಂತೆ ಭಾರತದಲ್ಲಿ 90 ಮಿಲ್ಕ್ ಬ್ಯಾಂಕ್‌ಗಳಿವೆ. ಕರ್ನಾಟಕದಲ್ಲಿ ಮೊದಲ ಮಿಲ್ಕ್ ಬ್ಯಾಂಕ್ ಬೆಂಗಳೂರಲ್ಲಿ ಶುರುವಾಗಿತ್ತು. ಇದೀಗ ಬೆಂಗಳೂರಲ್ಲಿ ಎರಡು, ಬೆಳಗಾವಿ, ಮಂಗಳೂರು, ಧಾರವಾಡದಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪನೆಗೊಂಡಿವೆ. ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣೆಗೆರೆ,ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಿಲ್ಕ್ ಬ್ಯಾಂಕ್ ಇಲ್ಲ. ಈ ಕೊರತೆ ನೀಗಿಸಲು ಹಾಗೂ ನವಜಾತ ಶಿಶುಗಳಿಗೆ ಪ್ರಯೋಜನವಾಗಲೆಂದೇ ಮಿಲ್ಕ್ ಬ್ಯಾಂಕ್ ಅನ್ನು ಶಿವಮೊಗ್ಗದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ವೈದ್ಯ ಡಾ. ಪಿ.ನಾರಾಯಣ್, ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ.ಶಿವರಾಜ್, ಜೆ.ಪಿ.ಚಂದ್ರು, ಕಿರಣ್ ಕುಮಾರ್, ಬಸವರಾಜ್, ವಲಯ ಲೆಫ್ಟಿನೆಂಟ್ ಧರ್ಮೇಂದ್ರ ಸಿಂಗ್, ಸರ್ಜಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ವಿ.ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.
ಡಿ.20ರಂದು ಮಿಲ್ಕ್ ಬ್ಯಾಂಕ್ ಉದ್ಘಾಟನೆ
ಡಿ.20ರಂದು ಬೆಳಗ್ಗೆ 11ಕ್ಕೆ ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಮಿಲ್ಕ್ ಬ್ಯಾಂಕ್ ಅನ್ನು ಕೋಡಿಮಠದ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿ ಉದ್ಘಾಟನೆಗೊಳ್ಳಲಿದೆ. ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಆಶಾ ಬೆನಕಪ್ಪ ಮುಖ್ಯ ಅತಿಥಿಗಳಾಗಿರುವರು. ವೈದ್ಯ ಡಾ. ಪಿ.ನಾರಾಯಣ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ.ಶಿವರಾಜ್ ಅಧ್ಯಕ್ಷತೆ ವಹಿಸುವರು.
3ರಿಂದ 6 ತಿಂಗಳವರೆಗೆ ಸಂಗ್ರಹ
ಪಾಶ್ಚರೀಕರಿಸಿದ ಹಾಲನ್ನು ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಶೇಖರಣೆ ಮಾಡಲಾಗುತ್ತದೆ. 3ರಿಂದ 6 ತಿಂಗಳವರೆಗೆ ಸಂಗ್ರಹಿಸಿಡಬಹುದಿದ್ದು ಆ ಅವಧಿಯಲ್ಲಿ ಯಾವಾಗ ಬೇಕಾದರೂ ಬಳಸಬಹುದು ಮತ್ತು ಮರುಬಳಕೆ ಮಾಡುವಾಗ ಸೂಕ್ತ ವೈಜ್ಞಾನಿಕ ರೀತಿಯಲ್ಲಿ ಕೊಠಡಿ ಉಷ್ಣಾಂಶಕ್ಕೆ ತರಲಾಗುತ್ತದೆ. ತಾಯಂದಿರು ಮಾನವೀಯ ಕಾಳಜಿ ಮೂಲಕ ಎದೆಹಾಲು ದಾನ ಮಾಡಲು ಮುಂದೆ ಬರಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಎದೆಹಾಲನ್ನು ಸಂಗ್ರಹಿಸಲು ಮತ್ತು ಪೂರೈಕೆ ಮಾಡಲು ಸಾಧ್ಯವಾಗುತ್ತದೆ. 36 ವಾರಕ್ಕೆ ಜನಿಸಿದರೆ ಮಗುವಿಗೆ ತಾಯಿಯ ಹಾಲು ಅವಶ್ಯಕ. ತಾಯಿ ಹಾಲು ಸಂಸ್ಕರಿಸಿ, ಪ್ಯಾಸ್ಟರೈಸ್ ಮಾಡಲಾಗುತ್ತದೆ.ಪ್ರತಿ ಎಂಎಲ್‌ಗೆ 4.50 ರೂ.ನಿಂದ 6 ರೂ.ವರೆಗೆ ಖರ್ಚು ಬರುತ್ತಿದ್ದು ಮೆಗ್ಗಾನ್ ಆಸ್ಪತ್ರೆಗೆ ಶೇ.30ರಿಂದ 50ರಷ್ಟು ಹಾಲನ್ನು ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಎಂಎಲ್‌ಗೆ 2ರಿಂದ 2.5 ರೂ.ಗೆ ನೀಡಲಾಗುವುದು ಎಂದು ಡಾ. ಸರ್ಜಿ ಹೇಳಿದರು.
ಒಪಿಡಿ ತಾಯಂದಿರಿಗೆ ಮೋಟಿವೇಶನ್
ತಾಯಂದಿರ ಹಾಲು ಸಂಗ್ರಹ ಮಾಡುವುದೇ ಸವಾಲಾಗಿದೆ. ಸರ್ಜಿ ಆಸ್ಪತ್ರೆಗೆ ಪ್ರತಿನಿತ್ಯ ಕನಿಷ್ಠ 250 ತಾಯಂದಿರು ಒಪಿಡಿಗೆ ಬಂದು ಹೋಗುತ್ತಾರೆ. ಅವರಿಗೆ ಮೋಟಿವೇಷನ್ ಮಾಡುತ್ತೇವೆ. ಈಗಾಗಲೇ ಕಳೆದ 10 ದಿನಗಳಿಂದ ಪ್ರಾಯೋಗಿಕವಾಗಿ ಶುರು ಮಾಡಿದ್ದು ನಾಲ್ಕೈದು ಮಕ್ಕಳಿಗೆ ಸಂಗ್ರಹಿಸಿಟ್ಟ ಹಾಲು ನೀಡಲಾಗಿದೆ. ರಕ್ತದಾನದಂತೆ ಹಾಲು ದಾನ ಮಾಡುವುದೂ ತಾಯಂದಿರ ಬಹಳಷ್ಟು ಅನುಕೂಲತೆ ಇದೆ. ತಾಯಂದಿರು ಎದೆ ಹಾಲನ್ನು ನಿಯಮಿತವಾಗಿ ನೀಡುವುದರಿಂದ ಹೆರಿಗೆ ನಂತರದ ಖಿನ್ನತೆ, ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಡಾ. ಸರ್ಜಿ ಹೇಳಿದರು.