ಈಶಾನ್ಯ ದೆಹಲಿ ಹಿಂಸಾಚಾರ: ಕೇಂದ್ರ ಸರ್ಕಾರದ ವಿರುದ್ಧ ರಜಿನಿಕಾಂತ್​ ಕಿಡಿ

Rajini
Published on

ಚೆನ್ನೈ: ಕೆಲ ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೆಂಬಲ ವ್ಯಕ್ತಪಡಿಸಿದ್ದ ಸೂಪರ್​ಸ್ಟಾರ್​ ರಜಿನಿಕಾಂತ್​ ಇದೀಗ ಈಶಾನ್ಯ ದೆಹಲಿ ಹಿಂಸಾಚಾರ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗುಪ್ತಚರ ವೈಫಲ್ಯವೇ ಗಲಭೆಗೆ ಕಾರಣವೆಂದು ಆರೋಪಿಸಿದ್ದಾರೆ.

ಚೆನ್ನೈನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಖಂಡಿತವಾಗಿ ಇದು ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯ. ಗುಪ್ತಚರ ಇಲಾಖೆ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಗುಪ್ತಚರ ವೈಫಲ್ಯವೆಂದರೆ, ಅದು ಗೃಹ ಸಚಿವಾಲಯದ ವೈಫಲ್ಯ ಎಂದು ಟೀಕಿಸಿದರು.

ಪ್ರತಿಭಟನೆ ಹಿಂಸಾತ್ಮಕವಾಗಿರದೇ ಶಾಂತಿಯುತವಾಗಿ ನಡೆಯಬೇಕಿತ್ತು. ಪ್ರತಿಭಟನೆ ನಡೆದರೆ, ಅದು ಖಂಡಿತವಾಗಿ ಉಕ್ಕಿನ ಕೈಗಳಿಂದ ನಡೆಸಬೇಕು. ಅದನ್ನು ಬಿಟ್ಟು ಹಿಂಸೆಯನ್ನು ಆಯ್ದುಕೊಳ್ಳಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಸಿಎಎ ಪರ-ವಿರೋಧ ಬಣಗಳಿಂದ ಉಲ್ಬಣಗೊಂಡ ಗಲಭೆ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿ ಈವರೆಗೂ 27 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ರಜಿನಿಕಾಂತ್​ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಸಿಎಎ ಪರವಾಗಿ ಮಾತನಾಡಿದ್ದ ರಜಿನಿಕಾಂತ್​ ಸಿಎಎಯಿಂದ ಮುಸ್ಲೀಮರಿಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೇನಾದರೂ ತೊಂದರೆಯಾದರೆ, ಅದರ ವಿರುದ್ಧ ದನಿಯೆತ್ತುವ ಮೊದಲಿಗೆ ನಾನಾಗಿರುತ್ತೇನೆ ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net