

ಮಂಗಳೂರು: ಸಂಸತ್ತಿನಲ್ಲಿ ದಕ್ಷಿಣ ರಾಜ್ಯಗಳ ಸಂಖ್ಯಾಬಲವನ್ನು ಕಡಿಮೆ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಕಾಂಗ್ರೆಸ್ ಇದರ ವಿರುದ್ಧ ಹೋರಾಟ ಮಾಡಲಿದೆ ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದ ಬಳಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು. ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ಮುಂದಾಗಿರುವ ಬಗ್ಗೆ ಕೇಳಿದಾಗ, "ಕೇಂದ್ರ ಸರ್ಕಾರ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲು ಮುಂದಾಗಿರುವುದನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ. ಇದು ಸರಿಯಲ್ಲ. ಇದರ ವಿರುದ್ಧ ಚುನಾವಣಾ ಆಯೋಗ, ನ್ಯಾಯಾಲಯಗಳ ಮೂಲಕ ನಾವು ಹೋರಾಟ ಮಾಡುತ್ತೇವೆ" ಎಂದು ತಿಳಿಸಿದರು.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದ ಇತಿಹಾಸ ಪ್ರಸಿದ್ಧ ಶ್ರೀ ಹೊಸಮಾರಿಗುಡಿಯ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಡಿಸಿಎಂ, ಎಲ್ಲರನ್ನೂ ಕಾಪಾಡುವ ಮಾರಮ್ಮನ ಪವಿತ್ರವಾದ ಕ್ಷೇತ್ರ ಕಾಪು. ಇಲ್ಲಿಗೆ ಬಂದಿರುವುದು ನನ್ನ ದೊಡ್ಡ ಭಾಗ್ಯ. ನಾನು ನೂರಾರು ದೇವಾಲಯ ನೋಡಿದ್ದೇನೆ. ಆದರೆ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ರೀತಿ ಬೇರೆ ಯಾವುದನ್ನೂ ನಾನು ನೋಡಿಲ್ಲ ಎಂದರು.
ಶಿಲ್ಪಿಗಳು ಅದ್ಭುತವಾಗಿ ಕಲ್ಲು, ಮರದ ಕೆಲಸ ಮಾಡಿದ್ದಾರೆ. ಈ ದೇವಾಲಯ ಹಾಗೂ ಈ ದೇವಿಗೆ ಜಾತಿ ತಾರತಮ್ಯ ಇಲ್ಲ. ಮೇಲ್ಜಾತಿಯವರಿಂದ ಕೆಳ ಜಾತಿವರೆಗೂ ಎಲ್ಲರಿಗೂ ಇಲ್ಲಿ ಅವಕಾಶವಿದೆ. ಇಲ್ಲಿ ಮಾನವ ಜಾತಿ ಮಾತ್ರ ಇದೆ. ನಾನು ನಂಬಿರುವ ನಮ್ಮ ಗುರುಗಳು ನನಗೆ, 'ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ' ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ತತ್ವ ಈ ದೇವಾಲಯದಲ್ಲಿ ಎದ್ದು ಕಾಣುತ್ತಿದೆ ಎಂದು ಹೇಳಿದರು.