ಹೈನೋದ್ಯಮಕ್ಕೆ ಟಾನಿಕ್: ​ಕ್ಷೀರ ಕ್ರಾಂತಿಗೆ ಕೇಂದ್ರ ಸರ್ಕಾರ ಕ್ರಮ, 4,558 ಕೋಟಿ ರೂ. ನೆರವು

Milk Revolution
Published on

ನವದೆಹಲಿ: ಹೈನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಲು -ಠಿ; 4,558 ಕೋಟಿ ಮೊತ್ತದ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಇದರಿಂದ ಡೇರಿ ರೈತರ ಸಾಲದ ಮೇಲಿನ ಸಬ್ಸಿಡಿ ಅಥವಾ ಬಡ್ಡಿಗೆ ನೀಡುವ ಸಹಾಯಧನ ಶೇ. 2ರಿಂದ 2.5ಕ್ಕೆ ಏರಿಕೆಯಾಗಲಿದೆ. ಈ ಯೋಜನೆಯಿಂದ ದೇಶದ 95 ಲಕ್ಷ ರೈತರಿಗೆ ಲಾಭವಾಗಲಿದೆ.

ಡೇರಿ ಸಂಸ್ಕರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) ಯೋಜನೆಯನ್ವಯ ಸಾಲದ ಮೇಲಿನ ಸಬ್ಸಿಡಿ ಪ್ರಮಾಣ ಹೆಚ್ಚಿಸಲಾಗಿದೆ. ಈ ಯೋಜನೆಯ ಪರಿಷ್ಕೃತ ಅನುದಾನ -ಠಿ;11,184 ಕೋಟಿ ಆಗಲಿದೆ. ರೈತ ಸಮೂಹಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ರೈತೋತ್ಪನ್ನ ಸಂಸ್ಥೆ: 2024ರೊಳಗೆ ಹೊಸದಾಗಿ ಸುಮಾರು 10,000 ರೈತೋತ್ಪನ್ನ ಸಂಸ್ಥೆಗಳನ್ನು ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ ಬಜೆಟ್​ನಲ್ಲಿ -ಠಿ;4,500 ಕೋಟಿ ರೂಪಾಯಿ ಒದಗಿಸಲಾಗುತ್ತದೆ. ಉತ್ಪಾದನೆ ವೆಚ್ಚ ಕಡಿತ ಹಾಗೂ ರೈತರ ಆದಾಯ ಹೆಚ್ಚಿಸುವುದು ಇದರ ಉದ್ದೇಶ. ಈ ಯೋಜನೆಯಿಂದ 1.50 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸಂಪುಟದ ಇತರ ನಿರ್ಧಾರ:

  • 22ನೇ ಕಾನೂನು ಆಯೋಗ ರಚನೆಗೆ ಒಪ್ಪಿಗೆ.
  • ಸಂಕೀರ್ಣ ಕಾನೂನು ವಿಚಾರಗಳಲ್ಲಿ ಈ ಆಯೋಗ ಸರ್ಕಾರಕ್ಕೆ ಸಲಹೆ ನೀಡಲಿದೆ.
  • ವೀರ್ಯದಾನ ಕಾನೂನು ತಿದ್ದುಪಡಿ ಮಸೂದೆಗೆ ಅನುಮೋದನೆ
  • ಎರಡನೇ ಹಂತದ ಸ್ವಚ್ಛ ಭಾರತ ಯೋಜನೆ ಜಾರಿಗೆ ಅಂಗೀಕಾರ. ಈ ಯೋಜನೆಯು 2020-21ರಿಂದ 2024-25ರಲ್ಲಿ ಜಾರಿಯಾಗಲಿದೆ.

ಬೆಳೆ ವಿಮೆ ಯೋಜನೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಐಚ್ಛಿಕಗೊಳಿಸುವ ಉದ್ದೇಶದಿಂದ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಕೃಷಿ ವಿಮೆ ಕುರಿತ ಈ ಯೋಜನೆಯ ಲೋಪದೋಷಗಳನ್ನು ನಿವಾರಿಸಲು ಸರ್ಕಾರ ಕ್ರಮಕೈಗೊಂಡಿದೆ. 2016ರಲ್ಲಿ ಆರಂಭಿಸಲಾದ ಈ ಯೋಜನೆಯನ್ವಯ ಸಾಲ ಪಡೆಯುವ ರೈತರು ವಿಮೆ ಮಾಡಿಸುವುದು ಕಡ್ಡಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net