ಮಹಾಸಭಾ ವೆಚ್ಚದ ವಿವರ ಕೊಡುವುದು ಕೇಂದ್ರ ಸಮಿತಿ: ರುದ್ರಮುನಿ ಸಜ್ಜನ್

veerashava lingayata mahasabha
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಮಾತನಾಡಿದರು. ಸಮಾಜದ ಮುಖಂಡರಾದ ಜಿ.ಎಂ.ಮಲ್ಲಿಕಾರ್ಜುನಸ್ವಾಮಿ, ಆನಂದಮೂರ್ತಿ, ಕೆ.ಆರ್.ಸೋಮನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೈಲಾ ಪ್ರಕಾರ ನಡೆದಿರುವ ಜಿಲ್ಲಾ ಭವನದ ಕಾಮಗಾರಿಯ ಲೆಕ್ಕಪತ್ರ, ವೆಚ್ಚದ ವಿವರ ನೀಡುವುದು ಮತ್ತು ಸಾಮಾನ್ಯ ಸಭೆ ಕರೆಯುವುದು ಕೇಂದ್ರ ಸಮಿತಿ. ಜಿಲ್ಲಾ ಸಮಿತಿಗಳಿಗೆ ಆ ಅಧಿಕಾರವಿಲ್ಲ. ರಾಜ್ಯ ಉಪಾಧ್ಯಕ್ಷರಾಗಿರುವ ಎಚ್.ಎಂ.ಚಂದ್ರಶೇಖರಪ್ಪ ಅವರಿಗೂ ಅಷ್ಟೂ ಅರಿವಿಲ್ಲವೇ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಪ್ರಶ್ನಿಸಿದರು.

ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಾಣ ಮಾಡಿದ್ದು, ಅದಕ್ಕೆ ಕೇಂದ್ರ ಸಮಿತಿ ಚೆಕ್ ಮುಖಾಂತರ ನಿರ್ಮಿತಿ ಕೇಂದ್ರಕ್ಕೆ ಅನುದಾನ ನೀಡಿದೆ. ಚೆಕ್ ಮೂಲಕವೇ ಹಣಕಾಸಿನ ವಹಿವಾಟು ನಡೆದಿದೆ. ಕೇಂದ್ರ ಸಮಿತಿ ಪ್ರತಿ ವರ್ಷವೂ ಆಡಿಟ್ ಮಾಡಲಿದೆ. ಮಹಾಸಭಾ ಜಿಲ್ಲಾ ಘಟಕದಲ್ಲಿ ನಯಾಪೈಸೆಯೂ ದುರ್ಬಳಕೆ ಆಗಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಜಿಲ್ಲಾ ಕೇಂದ್ರದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಎರಡು ಕೋಟಿ ರೂ. ಅನುದಾನ ನೀಡಿದ್ದು ಜೂ.14ರಂದು ಉದ್ಘಾಟನೆಗೊಂಡಿದೆ. ಮಹಾಸಭಾಕ್ಕೆ ಸ್ವಂತ ಕಟ್ಟಡದ ಅಗತ್ಯವಿದ್ದು ಸೂಡಾದ ಸಹಕಾರದಿಂದ ಕುವೆಂಪು ನಗರದಲ್ಲಿ 14 ಲಕ್ಷ ರೂ. ಮೌಲ್ಯದ ನಿವೇಶನ ಪಡೆದು 355.82 ಚದರ ಮೀಟರ್ ನಿವೇಶನ ಪಡೆಯಲಾಗಿದೆ. ಸೂಡಾದಿಂದ 21.49 ಲಕ್ಷ ರೂ. ವೆಚ್ಚದಲ್ಲಿ 298.45 ಚದರ ಮೀಟರ್‌ನ ಮತ್ತೊಂದು ನಿವೇಶನ ಮಂಜೂರಾಗಿದ್ದು ಅದರಲ್ಲಿ ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಆರಂಭಿಸುವ ಚಿಂತನೆ ನಡೆಸಿದ್ದೇವೆ. ಕಳೆದ 14 ವರ್ಷಗಳಿಂದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದುವರಿಯಬೇಕೆಂಬ ಆಸೆ ಇಲ್ಲ. ಆದರೆ ಭವನದ ಕಾಮಗಾರಿ ಇನ್ನೂ ಸ್ವಲ್ಪ ಬಾಕಿ ಉಳಿದಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವವರೆಗೂ ಅಧ್ಯಕ್ಷರಾಗಿ ಮುಂದುವರಿಯುವಂತೆ ಸಮಾಜದ ಶ್ರೀಗಳ ಒತ್ತಾಸೆ ಮೇರೆಗೆ ಮತ್ತೊಂದು ಅವಧಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ನಾನು ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಾಗ ಜಿಲ್ಲಾ ಘಟಕದಲ್ಲಿ ಕೇವಲ 1,200 ಸದಸ್ಯತ್ವವಿತ್ತು. ಈಗ 8,500 ಸದಸ್ಯತ್ವ ಮಾಡಿಸಲಾಗಿದೆ. ಭವಿಷ್ಯದಲ್ಲಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸುವುದು. ವಧು-ವರರ ಅನ್ವೇಷಣಾ ಕೇಂದ್ರ ತೆರೆಯುವುದು. ಸಮಾಜದ ವಿಸ್ತರಣಾ ಚಟುವಟಿಕೆಗೆ ಈಗಿರುವ ಕಟ್ಟಡವನ್ನು ವಿಸ್ತರಣೆ ಮಾಡುವುದು ಅಥವಾ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷದ ಸ್ಥಾನ ಆಕಾಂಕ್ಷಿ ಜಿ.ಎಂ.ಮಲ್ಲಿಕಾರ್ಜುನಸ್ವಾಮಿ, ಸಮಾಜದ ಮುಖಂಡರಾದ ಆನಂದಮೂರ್ತಿ, ಕೆ.ಆರ್.ಸೋಮನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

21ರಂದು ಜಿಲ್ಲಾ, ತಾಲೂಕು ಘಟಕಗಳಿಗೆ ಚುನಾವಣೆ
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳಿಗೆ ಜು.21ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಮತದಾನವು ಶಿವಮೊಗ್ಗದ ಬಸವೇಶ್ವರ ವಿದ್ಯಾಸಂಸ್ಥೆ, ಭದ್ರಾವತಿಯ ವೀರಭದ್ರೇಶ್ವರ ಸಭಾಭವನ, ಶಿಕಾರಿಪುರ ಕೆನರಾ ಬ್ಯಾಂಕ್ ಹಿಂಭಾಗದ ಬಸವಾಶ್ರಮ, ಸಾಗರ ನೆಹರು ಮೈದಾನ ಹತ್ತಿರದ ವೀರಶೈವ ವಿದ್ಯಾರ್ಥಿ ನಿಲಯ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ ಹೊಸನಗರದ ಬ್ರಹ್ಮೇಶ್ವರ ದೇವಸ್ಥಾನ ಹಾಗೂ ಸೊರಬ ಮುರುಘಾ ಮಠದಲ್ಲಿ ಮತದಾನ ನಡೆಯಲಿದೆ. ಮತದಾರರು ಮಹಾಸಭಾ ಗುರುತಿನ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿಯಲ್ಲಿ ಯಾವುದಾದರೂ ಒಂದನ್ನು ತರಬೇಕು ಎಂದು ಜಿಲ್ಲಾ ಘಟಕದ ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net