

ರೈತರಿಗೆ 20 ಲಕ್ಷ ಕೋಟಿ ರೂ.ಗಳ ಸಾಲ ನೀಡುವ ಪ್ರಸ್ತಾಪ ಒಳ್ಳೆಯದೇ ಆದರೂ ಬಡ್ಡಿದರ ಕಡಿಮೆ ಮಾಡಿದ್ದರೆ ಅದರ ಫಲ ಹೆಚ್ಚಿನ ರೈತರಿಗೆ ಸಿಗುತ್ತಿತ್ತು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿರುವುದು ಒಳ್ಳೆಯದೇ. ಆದರೆ ಮೌಲ್ಯವರ್ಧನೆ, ಬ್ರಾಂಡಿಂಗ್, ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆಗೆ ಇನ್ನೂ ಹೆಚ್ಚಿನ ನೆರವು ಕೇಂದ್ರದಿಂದ ನೀಡಬೇಕಾಗಿದೆ. ದೇಶದ ಒಂದು ಕೋಟಿ ರೈತರನ್ನು ಸಾವಯವ ಕೃಷಿಗೆ ಒಳಪಡಿಸುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ. ಸಿರಿಧಾನ್ಯ ವರ್ಷದಲ್ಲಿ ಇದೊಂದು ಒಳ್ಳೆಯ ಕ್ರಮ. ಆದರೆ ಸಾವಯವ ಬೆಳೆ ಹಾಗೂ ರಾಸಾಯನಿಕ ಬೆಳೆಗಳ ನಡುವೆ ವ್ಯತ್ಯಾಸ ತಿಳಿಯುವಂತಹ ಪ್ರಯತ್ನ ಆಗಬೇಕಾಗಿದೆ. ರೈತರ ಕೃಷಿ ಭೂಮಿಯಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಸತ್ವ ಹೆಚ್ಚಿಸುವ ಕಾರ್ಯಕ್ರಮಗಳತ್ತ ಗಮನ ಇನ್ನೂ ಅಧಿಕವಾಗಬೇಕಾಗಿದೆ.
ಕೃಷಿಗೆ ಹೆಚ್ಚಿನ ಆದ್ಯತೆ ಸಿಕ್ಕಾಗ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯವಾಗುತ್ತದೆ ಹಾಗೂ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಹೆಚ್ಚಿಸಿ ಮೌಲ್ಯವರ್ಧನೆ ಮಾಡಿದಾಗ ಗ್ರಾಮೀಣಾಭಿವೃದ್ಧಿ ಆಗುತ್ತದೆ. ಈ ಬಜೆಟ್ನಲ್ಲಿ ಕೃಷಿಗೆ ಮೇಲುನೋಟಕ್ಕೆ ಗಮನಿಸಿದಾಗ ಹೆಚ್ಚಿನ ಆದ್ಯತೆ ಸಿಕ್ಕಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಇನ್ನೂ ಅಭಿವೃದ್ಧಿ ಸಾಧಿಸಬೇಕಾಗಿರುವುದು ಸಾಕಷ್ಟು ಇದೆ. ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸರ್ಕಾರಗಳಿಂದ ಹೆಚ್ಚಾಗಬೇಕಾಗಿದೆ.