

ದೇಶದ ಅರ್ಥವ್ಯವಸ್ಥೆ ಚೇತರಿಕೆಯ ಹಾದಿಯಲ್ಲಿರುವುದು ಆಶಾದಾಯಕ ಬೆಳವಣಿಗೆ. ಆದರೆ ಕೋವಿಡ್-19 ಸಂಕಷ್ಟದ ಕಾರಣ ಅತೀವ ತೊಂದರೆಗೆ ಒಳಗಾದವರು ಜನಸಾಮಾನ್ಯರು ಮತ್ತು ವೇತನ ಪಡೆಯುವ ಮಧ್ಯಮವರ್ಗ. ದೇಶದ ಜನಸಂಪನ್ಮೂಲದಲ್ಲಿ ಇವರದ್ದೇ ಬಹುಪಾಲು. ಮೂರು ವರ್ಷಗಳಲ್ಲಿ ಆಗಿರುವ ಸ್ಥಿತ್ಯಂತರಗಳ ಕಾರಣ ಬಹುತೇಕರ ವೈಯಕ್ತಿಕ ಮತ್ತು ಕೌಟುಂಬಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಎಂಟು ವರ್ಷಗಳ ಹಿಂದಾಗಿದ್ದರೆ ಕೇಂದ್ರ ಬಜೆಟ್ ಎಂದರೆ ಈ ವರ್ಗ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಹಾಗಲ್ಲ. ಕೇಂದ್ರ ಮತ್ತು ರಾಜ್ಯ ಬಜೆಟ್ ಎಂದಾಕ್ಷಣವೇ ಜನಸಾಮಾನ್ಯರ ಕಿವಿಯೂ ಚುರುಕಾಗಿಬಿಡುತ್ತದೆ. ನಿರೀಕ್ಷೆಗಳೂ ಗರಿಗೆದರುತ್ತವೆ.
80ಡಿ ಮಿತಿ ಹೆಚ್ಚಳ: ಆರೋಗ್ಯ ವಿಮೆಗೆ ನೀಡಿರುವ ತೆರಿಗೆ ವಿನಾಯಿತಿ ಮಿತಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ವ್ಯಾಪ್ತಿಯಲ್ಲಿದೆ. ಸದ್ಯ ನೀಡಿರುವ ತೆರಿಗೆ ವಿನಾಯಿತಿ ಆರೋಗ್ಯ ವಿಮೆ ಖರೀದಿಗೆ ಉತ್ತೇಜನ ನೀಡುವಷ್ಟು ಪ್ರಮಾಣದಲ್ಲಿ ಇಲ್ಲ. ಸದ್ಯ ವಾರ್ಷಿಕ 25 ಸಾವಿರ ರೂಪಾಯಿ ವೈಯಕ್ತಿಕ ಮತ್ತು ಕುಟುಂಬದ ವಿಮಾ ಪ್ರೀಮಿಯಂ, ಪಾಲಕರ ವೈದ್ಯಕೀಯ ವಿಮೆಯ 50 ಸಾವಿರ ರೂಪಾಯಿ ಇದರಲ್ಲಿದೆ. ಇಲ್ಲಿ ಸರ್ಕಾರ, ಜನರಿಗೆ ಆರೋಗ್ಯ ವಿಮೆ ಖರೀದಿಸುವುದಕ್ಕೆ ಉತ್ತೇಜನ ನೀಡಬೇಕು ಮತ್ತು ಸರಿಯಾದ ಸಮ್ ಅಶ್ಯೂರ್ಡ್ ಇರುವ ಆರೋಗ್ಯ ವಿಮೆ ಖರೀದಿಸುವುದನ್ನು ಖಾತರಿಗೊಳಿಸುವ ಕಡೆಗೆ ಗಮನಹರಿಸಬೇಕು. ಇದಕ್ಕಾಗಿ, ವಯೋಮಿತಿ ಮೀರಿ ಆರೋಗ್ಯ ವಿಮೆ, ವೆಚ್ಚದ ತೆರಿಗೆ ವಿನಾಯಿತಿ ಮೊತ್ತವನ್ನು ದುಪ್ಪಟ್ಟುಗೊಳಿಸಬೇಕು.
ಶಿಕ್ಷಣದ ಉಳಿತಾಯಕ್ಕೆ ವಿನಾಯಿತಿ: ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಉಳಿತಾಯ ಮಾಡುತ್ತಿರುತ್ತಾರೆ. ಇಂತಹ ಉಳಿತಾಯಗಳಿಗೆ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ಸದ್ಯ ಶಿಕ್ಷಣ ಶುಲ್ಕ ಪಾವತಿಸಿದ್ದಕ್ಕೆ ವಿನಾಯಿತಿ ಸಿಗುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಉಳಿತಾಯಕ್ಕೂ ವಿನಾಯಿತಿ ಸಿಗುವಂತಾಗಬೇಕು. ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಗುವಿಗೆ ಮಾತ್ರ ಸೀಮಿತವಾಗಿದ್ದು, ಇದರಂತೆ ಗಂಡುಮಗುವಿನ ಶಿಕ್ಷಣಕ್ಕೂ ಉಳಿತಾಯ ಯೋಜನೆಗಳು ಘೋಷಣೆ ಆಗಬೇಕು.
80ಸಿ ಮಿತಿ ಏರಿಕೆ: ದೇಶದ ಅರ್ಥವ್ಯವಸ್ಥೆಯಲ್ಲಿ ಏರುತ್ತಿರುವ ಹಣದುಬ್ಬರ ಪ್ರಮಾಣ ಮತ್ತು ಕೋವಿಡ್-19 ಸಂಕಷ್ಟವನ್ನು ಗಮನದಲ್ಲಿ ಇರಿಸಿಕೊಂಡು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಯ ಮಿತಿಯನ್ನು ವಾರ್ಷಿಕ ಕನಿಷ್ಠ 2.5 ಲಕ್ಷ ರೂಪಾಯಿಗೆ ಏರಿಸಬೇಕು. ಸರಾಸರಿ ತೆರಿಗೆದಾರ ಜನಸಾಮಾನ್ಯನಿಗೆ ಸರ್ಕಾರದ ಈ ಕ್ರಮ ಬಹಳ ನೆರವಾಗಲಿದೆ.
ಆದಾಯ ತೆರಿಗೆ ಸ್ತರದಲ್ಲಿ ಪರಿಷ್ಕರಣೆ: ಆದಾಯ ತೆರಿಗೆ ವಿನಾಯಿತಿಗೆ ಸಂಬಂಧಿಸಿ ವಾರ್ಷಿಕ ಆದಾಯ ಸ್ತರಗಳಲ್ಲಿ ಪರಿಷ್ಕರಣೆ ಆಗಬೇಕು. ಗರಿಷ್ಠ ತೆರಿಗೆ ಸ್ತರವನ್ನು ಈಗಿರುವ ವಾರ್ಷಿಕ -ಠಿ; 10 ಲಕ್ಷ ಮೇಲ್ಪಟ್ಟ ಆದಾಯದಿಂದ 20 ಲಕ್ಷ ರೂಪಾಯಿಗೆ ಏರಿಸಬೇಕು. ಶೇಕಡ 30ರ ತೆರಿಗೆಯನ್ನು ಶೇಕಡ 25ಕ್ಕೆ ಇಳಿಸಬೇಕು. ಇದೇ ರೀತಿ ಉಳಿದ ತೆರಿಗೆ ಆದಾಯದ ಮಿತಿ ಏರಿಸಬೇಕು ಮತ್ತು ತೆರಿಗೆ ದರ ಇಳಿಸಬೇಕು.
ವರ್ಕ್ ಫ್ರಂ ಹೋಮ್ ಭತ್ಯೆ ನೀಡಬೇಕು: ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಬಹುಕಾಲದಿಂದ ವರ್ಕ್ ಫ್ರಂ ಹೋಮ್ ಭತ್ಯೆ ಒದಗಿಸಬೇಕು ಎಂಬ ಬೇಡಿಕೆ ಇರಿಸಿದ್ದಾರೆ. ಇದಕ್ಕೆ ಪೂರಕವಾಗಿ, ಡೆಲಾಯಿಟೆ ಇಂಡಿಯಾ ಕೂಡ ‘ಕನಿಷ್ಠ 50 ಸಾವಿರ ರೂ. ವರ್ಕ್ ಫ್ರಂ ಹೋಮ್ ಬೋನಸ್ ನೀಡುವುದು ಅವಶ್ಯ. ವರ್ಕ್ ಫ್ರಂ ಹೋಮ್ ಪರಿಕಲ್ಪನೆಯಲ್ಲಿ ಕೆಲಸದ ಅವಧಿ ಹೆಚ್ಚಾಗಿರುವುದು ಗಮನಾರ್ಹ. ಉದ್ಯೋಗಿಗಳು ಕಚೇರಿ ಕೆಲಸಕ್ಕೆ ವ್ಯಕ್ತಿಗತವಾಗಿ ಖರ್ಚು ಮಾಡುತ್ತಿದ್ದಾರೆ. ಇದನ್ನು ಕಂಪನಿಗಳೇ ಭರಿಸಬೇಕು’ ಎಂದು ಶಿಫಾರಸು ಮಾಡಿತ್ತು.
ಹೂಡಿಕೆ ಮೇಲಿನ ತೆರಿಗೆ ಸರಳೀಕರಣ: ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ಎಸ್ಎಸ್) ಕೆಟಗರಿಯನ್ನು ಪರಿಚಯಿಸಿ ಹೂಡಿಕೆದಾರರಿಗೆ ತೆರಿಗೆ ಉಳಿತಾಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ವಿಭಾಗದಲ್ಲಿ ತೆರಿಗೆ ಉಳಿತಾಯಕ್ಕೆ ಇನ್ನಷ್ಟು ಅವಕಾಶ ಒದಗಿಸುವಂತೆ ಯೋಜನೆಗಳನ್ನು ಪ್ರಕಟಿಸಬೇಕು. ವೇತನ ಪಡೆಯುವ ಉದ್ಯೋಗಿಗಳ ಹೂಡಿಕೆಯನ್ನು ಇನ್ನಷ್ಟು ಸರಳವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ: ಆದಾಯ ತೆರಿಗೆ ವಿನಾಯಿತಿ ಕ್ರಮಗಳಲ್ಲಿ ಕೇಂದ್ರ ಸರ್ಕಾರ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 2018ರಲ್ಲಿ 25 ಸಾವಿರ ರೂಪಾಯಿ ಯಿಂದ 40 ಸಾವಿರ ರೂ.ಗೆ ಏರಿಸಿತು. ಪ್ರಸ್ತುತ ಈ ಮಿತಿ 50 ಸಾವಿರ ರೂ. ಇದೆ. ಈ ವರ್ಷ ಈ ಮಿತಿಯನ್ನು ಸರ್ಕಾರ ಇನ್ನೂ ಹೆಚ್ಚಿಸಬಹುದೆಂಬ ನಿರೀಕ್ಷೆ ಎಲ್ಲರಲ್ಲೂ ಇದೆ.
ಪಿಎಫ್ ಹೂಡಿಕೆ ಮಿತಿ: ಪ್ರಾವಿಡೆಂಟ್ ಫಂಡ್ ಮೇಲಿನ ವಾರ್ಷಿಕ ಹೂಡಿಕೆಗೆ 2.5 ಲಕ್ಷ ರೂ. ಮಿತಿಯನ್ನು ಕಳೆದ ಬಜೆಟ್ನಲ್ಲಿ ಹಾಕಲಾಗಿದೆ. ಪಿಎಫ್ನಲ್ಲಿ ಹೂಡಿಕೆ ಮಾಡುವ ವರ್ಗ ಬಹುತೇಕ ವೇತನ ಪಡೆಯುವ ಉದ್ಯೋಗಿಗಳು ಮತ್ತು ಕಿರು ಉದ್ಯೋಗದಲ್ಲಿರುವವರು. ಸದ್ಯದ ಪರಿಸ್ಥಿತಿಯಲ್ಲಿ ಉಳಿತಾಯಕ್ಕೆ ಅವರಿಗೆ ಇರುವ ದೊಡ್ಡ ಆಯ್ಕೆ ಇದು. ಇದರ ತೆರಿಗೆ ವಿನಾಯಿತಿ ಮಿತಿಯನ್ನು ಈಗ ಇರುವ 2.5 ಲಕ್ಷ ರೂ.ಯಿಂದ 4 ಲಕ್ಷ ರೂ.ಗೆ ಏರಿಸಬೇಕು. ಈ ಹೂಡಿಕೆಯನ್ನು ಸೋಷಿಯಲ್ ಸೆಕ್ಯೂರಿಟಿ ಸೇವಿಂಗ್ಸ್ ಎಂದು ಪರಿಗಣಿಸಿ ಉತ್ತೇಜನ ನೀಡಬೇಕು.
ಕ್ರಿಪ್ಟೋ ಹೂಡಿಕೆಗೆ ತೆರಿಗೆ: ದೇಶಾದ್ಯಂತ 10 ಕೋಟಿಗೂ ಅಧಿಕ ಜನ ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವುದಕ್ಕೆ ಸಾಧ್ಯವಾಗದ ರೀತಿಯಲ್ಲಿ ಬೆಳವಣಿಗೆ ಹೊಂದಿವೆ. ಅವುಗಳನ್ನು ನಿಯಮದ ಚೌಕಟ್ಟಿಗೆ ತರುವ ಬಗ್ಗೆ ಚಿಂತನೆ ನಡೆಯಬೇಕು ಮತ್ತು ಇಂತಹ ಕರೆನ್ಸಿಗಳ ಮೇಲಿನ ಹೂಡಿಕೆಗೆ ತೆರಿಗೆ ವಿಧಿಸುವ ವಿಚಾರದಲ್ಲಿ ಸ್ಪಷ್ಟತೆ ಬೇಕು.