

ನವದೆಹಲಿ: ಹಿಂದಿನ ಪ್ರಯತ್ನಗಳಲ್ಲಿ ಅನುತ್ತೀರ್ಣರಾದ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ಲೈನ್ / ಆಫ್ಲೈನ್ ಪರೀಕ್ಷೆ ನಡೆಸಬೇಕೆಂದು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶಾಲೆಗಳಿಗೆ ಸೂಚಿಸಿದೆ.
ಕರೊನಾ ವೈರಸ್ ಹರಡುವಿಕೆಯಿಂದಾಗಿ ಉದ್ಭವಿಸಿದ ವಿಷಮ ಪರಿಸ್ಥಿತಿಯಿಂದಾಗಿ ಆತಂಕಕ್ಕೀಡಾದ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಮಂಡಳಿಗೆ ಸಾಕಷ್ಟು ವಿಚಾರಣೆಗಳು ಬಂದ ಹಿನ್ನೆಲೆಯಲ್ಲಿ ಮಂಡಳಿ ಈ ವಿಶೇಷ ನಿರ್ಧಾರ ಕೈಗೊಂಡಿದೆ.
ಮಂಡಳಿಯ ಪ್ರಕಾರ ವಿದ್ಯಾರ್ಥಿಗಳಿಗೆ ಅವರ ಪರೀಕ್ಷೆಗಳು ಪೂರ್ಣಗೊಂಡಿವೆಯೇ ಅಥವಾ ಫಲಿತಾಂಶಗಳನ್ನು ಪ್ರಕಟಿಸಲಾಗಿದೆಯೇ ಎಂಬುದನ್ನು ಪರಿಗಣಿಸದೆ ಅವಕಾಶಗಳನ್ನು ವಿಸ್ತರಿಸುವುದು ಮತ್ತು ವಿಷಯಗಳ ಸಂಖ್ಯೆ ಹಾಗೂ ಪ್ರಯತ್ನಗಳನ್ನು ಪರಿಗಣಿಸದೆ ಈ ಸೌಲಭ್ಯವನ್ನು ವಿಸ್ತರಿಸಬೇಕು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ ಪೋಖ್ರಿಯಾಲ್ ಸಿಬಿಎಸ್ಇ ಅಧಿಸೂಚನೆಯೊಂದಿಗೆ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಂಡಳಿ ಪ್ರಕಾರ ಸಿಬಿಎಸ್ಇ ಅಧೀನದ ಶಾಲೆಗಳು ಆನ್ಲೈನ್ / ಆಫ್ಲೈನ್/ ಹೊಸ ಪರೀಕ್ಷೆಗಳನ್ನು ನಡೆಸಬಹುದು ಮತ್ತು ಪರೀಕ್ಷೆಯಲ್ಲಿ ಅವರ ಸಾಧನೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬಹುದು. ಪರೀಕ್ಷೆಯನ್ನು ನಿಗದಿಪಡಿಸುವ ಮುನ್ನ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶವನ್ನು ನೀಡಬೇಕೆಂದು ಸಿಬಿಎಸ್ಇ ಸೂಚಿಸಿದೆ.