

* ಕಿರುವಾರ ಎಸ್. ಸುದರ್ಶನ್ ಕೋಲಾರ
ಕೋಲಾರ ಜಿಲ್ಲೆಯಲ್ಲಿನ ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರ ದೆಹಲಿವರೆಗೂ ಸದ್ದು ಮಾಡುತ್ತಿದೆ.
ಜಿಂಗಾಲಕುಂಟೆ ಅರಣ್ಯ ಪ್ರದೇಶ ಒತ್ತುವರಿ ತೆರವು ಕುರಿತ ಮಾಹಿತಿ ನೀಡುವಂತೆ ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗೆ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪತ್ರ ಬರೆದಿರುವುದೇ ಇದಕ್ಕೆ ಸಾಯಾಗಿದೆ.
2022ರ ಆಗಸ್ಟ್ನಲ್ಲಿ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭದಿಂದ ಇಲ್ಲಿವರೆಗೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ನೇತೃತ್ವದಲ್ಲಿ ಸುಮಾರು 2 ಸಾವಿರ ಎಕರೆಗೂ ಹೆಚ್ಚು ಒತ್ತುವರಿ ಜಮೀನು ವಶಕ್ಕೆ ಪಡೆಯಲಾಗಿದೆ.
ಇದರ ಮಧ್ಯೆ ಜಿಂಗಾಲಕುಂಟೆ ಅರಣ್ಯ ಪ್ರದೇಶ ಒತ್ತುವರಿ ತೆರವು ಕುರಿತು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯದ ಅಧಿಕಾರಿಗಳಿಗೆ ಡಿ.6ರಂದು ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (ಅರಣ್ಯ ಸಂರಕ್ಷಣಾ ವಿಭಾಗ) ಅಧಿಕಾರಿಗಳು ಪತ್ರ ಬರೆದಿದ್ದಾರೆ. ಜತೆಗೆ ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ ಪತ್ರ ಬರೆದಿದ್ದು, 2 ತಿಂಗಳಲ್ಲಿ ಮಾಹಿತಿ ನೀಡಲು ಜನರಲ್ ಆಫ್ ಫಾರೆಸ್ಟ್ ಸಹಾಯಕ ಇನ್ಸ್ಪೆಕ್ಟರ್ ಸಂಜಯ್ ಕುಮಾರ್ ಚೌಹಾಣ್ ಸೂಚಿಸಿದ್ದಾರೆ.
* ಕೋರ್ಟ್ ತೀರ್ಪು ಪಾಲಿಸದ ಅಧಿಕಾರಿಗಳು
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಜಿಂಗಲಕುಂಟೆ ಅರಣ್ಯ ಪ್ರದೇಶದಲ್ಲಿ 61 ಎಕರೆ 39 ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತೆರವುಗೊಳಿಸುವಂತೆ ಕೂಗು ಎದ್ದಿತ್ತು. ಈ ಸಂಬಂಧ ದಶಕದಿಂದ ಕಾನೂನು ಹೋರಾಟ ನಡೆಯುತ್ತಿದ್ದು, ಕೋರ್ಟ್ ಸಹ ಜಂಟಿ ಸರ್ವೇ ಮಾಡಿ ಒತ್ತುವರಿ ಗುರುತಿಸಿ ತೆರವುಗೊಳಿಸಲು ಆದೇಶಿಸಿತ್ತು. ಹಂತಹಂತವಾಗಿ ಅರಣ್ಯ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದಂತೆ ರಮೇಶ್ ಕುಮಾರ್ ಪ್ರಕರಣ ಮುನ್ನೆಲೆಗೆ ಬಂದಿದ್ದು, ಸರ್ಕಾರದ ಮಟ್ಟದಿಂದ ಒತ್ತಡ ತಂದು ಜಮೀನು ಉಳಿಸಿಕೊಳ್ಳುತ್ತಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಇದರ ಬೆನ್ನಲ್ಲೇ ರಮೇಶ್ಕುಮಾರ್, ಸ್ವಾಧಿನದಲ್ಲಿದ್ದ ಜಮೀನನ್ನು ದುರಸ್ತಿ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಅರಣ್ಯ ಇಲಾಖಾಧಿಕಾರಿಗಳು ಜಮೀನಿನ ಮಾಲೀಕತ್ವಕ್ಕಾಗಿ ದಾಖಲೆ ಮಂಡಿಸಿದ್ದರು. ಹೈಕೋರ್ಟ್ನಲ್ಲಿ ವಿಚಾರಣೆ ನಡೆದು ಅರಣ್ಯ ಜಮೀನು ಒತ್ತುವರಿ ಆಗಿರುವುದು ಕಂಡು ಬಂದಲ್ಲಿ ತೆರವುಗೊಳಿಸಿ ಕ್ರಮ ಜರುಗಿಸಬೇಕು ಎಂದು 2013ರ ಜು.11ರಂದು ತೀರ್ಪು ನೀಡಿತ್ತಾದರೂ ಅಧಿಕಾರಿಗಳು ಪಾಲಿಸಿರಲಿಲ್ಲ. ಈ ಸಂಬಂಧ ಕೇಂದ್ರದಿಂದ ರಾಜ್ಯಕ್ಕೆ, ರಾಜ್ಯದಿಂದ ಜಿಲ್ಲೆಗೆ ಪತ್ರ ವ್ಯವಹಾರ ನಡೆದಿದ್ದವು.
*ಚರ್ಚೆಗೆ ಗ್ರಾಸ
2024ರ ಅ.8ರಂದು ಕೇಂದ್ರ ಅರಣ್ಯ ಇಲಾಖೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಬರೆದ ಪತ್ರದಲ್ಲಿ 30 ದಿನಗಳೊಳಗೆ ಜಂಟಿ ಸರ್ವೇ ನಡೆಸಿ ಒತ್ತುವರಿ ಇದ್ದಲ್ಲಿ ತೆರವುಗೊಳಿಸಿ 60 ದಿನಗಳು ಒಳಗಡೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಇದರ ಹಿನ್ನೆಲೆಯಲ್ಲಿ ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯಿಂದ ನ.6ರಂದು ಜಂಟಿ ಸರ್ವೇ ಕಾರ್ಯ ನಡೆಸಲು ದಿನಾಂಕ ನಿಗದಿಪಡಿಸಿ ಕ್ರಮವಹಿಸಿದ್ದರು. ನಂತರದ ಬೆಳವಣಿಗೆಗಳಿಂದ ಒತ್ತುವರಿ ತೆರವು ಕಾರ್ಯವನ್ನು ತಾಂತ್ರಿಕ ಕಾರಣದಿಂದ ಮುಂದೂಡಿದ್ದರು. ಇದು ಸಾರ್ವಜನಿಕರ ವಲಯದಲ್ಲಿ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಯಿತು.
ಕೋಟ್...
ರಮೇಶ್ ಕುಮಾರ್ ಅವರ ಜಮೀನಿನ ಕಾಗದಪತ್ರಗಳನ್ನು ಎತ್ತಿಕೊಂಡು ಅರಣ್ಯ, ನ್ಯಾಯಾಲಯಕ್ಕೆ ಅಲೆದಾಡಿದ್ದೇನೆ. ಒತ್ತುವರಿ ಆರೋಪ ಎದುರಿಸುತ್ತಿರುವ ಅವರು ಜಂಟಿ ಸರ್ವೇ ಕಾರ್ಯ ಎದುರಿಸಿ ಆರೋಪಮುಕ್ತರಾಗಿ ಹೊರಗೆ ಬರಲಿ. ಜಂಟಿ ಸರ್ವೇ ಎದುರಿಸದೆ ವಾಮ ಮಾರ್ಗಗಳ ಮೂಲಕ ತನಗೊಂದು ಕಾನೂನು ಮತ್ತು ತಾಲೂಕಿನ ಸಾಮಾನ್ಯ ಜನರಿಗೊಂದು ಕಾನೂನಾ?. ಹಿಂದೆ ಶಾಸಕರಾಗಿದ್ದಾಗ 2021ರ ಏಪ್ರಿಲ್ನಲ್ಲಿ 2,800 ಎಕರೆ ರೈತರ ಜಮೀನು ಅರಣ್ಯ ಇಲಾಖೆಗೆ ಇಂಡಿಕರಣವಾದಾಗ ಯಾವುದೇ ಧ್ವನಿಯೆತ್ತಲಿಲ್ಲ?.
> ಶೇಷಾಪುರ ಗೋಪಾಲ್, ಮುಖಂಡ