ಸೆಲೆಬ್ರಿಟಿ ಕಾರ್ನರ್: ​ಸಂತೋಷ ಎನ್ನುವುದು ಒಳಗಿನಿಂದ ಬರಬೇಕು...

happiness
Published on

There is no path to Happiness; Happiness is the path

ಸಾವಿರಾರು ವರ್ಷಗಳ ಹಿಂದೆ ಬುದ್ಧ ಹೇಳಿದ ಮಾತು ಇದು. ಹಾಗೆಂದರೇನು ಎಂದು ವಿವರಿಸುವುದೇ ಬೇಡ. ಅದೇ ಎಲ್ಲವನ್ನೂ ಹೇಳಿಬಿಡುತ್ತದೆ. ನಾವೆಲ್ಲರೂ ಜೀವನಪೂತಿರ್ ಸಂತೋಷ, ತೃಪ್ತಿಯನ್ನು ಬಯಸುತ್ತೇವೆ. ಆದರೆ, ಬಹಳಷ್ಟು ಬಾರಿ ಅದು ಕನವರಿಕೆಯಾಗಿಯೇ ಉಳಿದುಬಿಡುತ್ತದೆ.

ಇಷ್ಟಕ್ಕೂ ಸಂತೋಷ ಎಲ್ಲಿ ಸಿಗುತ್ತದೆ? ಎಲ್ಲೂ ಸಿಗುವುದಿಲ್ಲ. ಅದನ್ನು ನಮ್ಮಲ್ಲಿ ನಾವೇ ಹುಡುಕಿಕೊಳ್ಳಬೇಕು. ನಿಜಕ್ಕೂ ಸಂತೋಷ ಎಂದರೆ ಏನು? ಜನಪ್ರಿಯತೆ, ಆಸ್ತಿ, ಅಂತಸ್ತು? ಉಹುಂ. ಸಂತೋಷ ಎನ್ನುವುದು ಒಳಗಿನಿಂದ ಬರಬೇಕು. ನಾವು ಪಾಸಿಟಿವ್​ ಆಗಿದ್ದರಷ್ಟೇ ಸಂತೋಷವಾಗಿರುವುದಕ್ಕೆ ಸಾಧ್ಯ. ಸುಮ್ಮನೆ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು, ಅವರನ್ನು ನೋಡಿ ಸಂಕಟ ಪಡುವುದು, ಅವರಿಗೆ ಕೆಟ್ಟದ್ದು ಬಯಸುವುದು, ನಾನೇನೂ ಆಗಲಿಲ್ಲ ಎಂದು ಕೊರಗುತ್ತಾ ಕೂರುವುದು ... ಇವೆಲ್ಲದರಿಂದ ಯಾವತ್ತೂ ಸಂತೋಷ ಸಿಗುವುದಿಲ್ಲ. ಇದೆಲ್ಲದರಿಂದ ಹೊರಬಂದಾಗಲಷ್ಟೇ ಏನಾದರೂ ಸಾಧ್ಯ. ನನಗೆ ತಿನ್ನೋಕೆ ಆಗೋದು ಒಂದೇ ಇಡ್ಲಿ. ಅಷ್ಟಕ್ಕೇ ಸಂತೋಷವಾಗಿರಬೇಕು ಅಷ್ಟೇ. ಅದು ಬಿಟ್ಟು ಪಕ್ಕದವನು ನಾಲ್ಕು ಇಡ್ಲಿ ತಿನ್ನುತ್ತಾನೆ, ನನ್ನಿಂದ ಅದು ಸಾಧ್ಯವಿಲ್ಲ ಎಂದು ಕೊರಗುತ್ತೇವೆ. ಎಷ್ಟು ಸಂಬಳ ಇದೆಯೋ ಅಷ್ಟರಲ್ಲಿ ಹೇಗೆ ಖುಷಿಯಾಗಿರಬೇಕು ಎಂದು ಯೋಚಿಸಬೇಕು. ಅದು ಬಿಟ್ಟು ಬೇರೆಯವರ ಖುಷಿ ನೋಡಿಕೊಂಡು ಯಾಕೆ ಕೊರಗಬೇಕು? ನಾವು ಕೊರಗುವುದರ ಬಗ್ಗೆ ಜಾಸ್ತಿ ಯೋಚನೆ ಮಾಡಬೇಕಾ? ಅಥವಾ ನಮ್ಮ ಬೆಳವಣಿಗೆ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾ? ಎಲ್ಲಕ್ಕಿಂತ ಹೆಚ್ಚಾಗಿ ನಮಗೇ ಯೋಚನೆ ಮಾಡುವುದಕ್ಕೆ ಸಾಕಷ್ಟು ವಿಷಯಗಳಿರುವಾಗ ಬೇರೆಯವರ ಬಗ್ಗೆ ಯಾಕೆ ಯೋಚಿಸಬೇಕು? ಯೋಚಿಸಿದರೂ ಅವರ ಒಳ್ಳೆಯದಕ್ಕೆ ಯೋಚಿಸಬೇಕೇ ಹೊರತು, ಕೆಡಕನ್ನು ಬಯಸಬಾರದು.

ಇಷ್ಟು ವರ್ಷಗಳ ಜೀವನದಲ್ಲಿ ನಾನು ನೋವು, ನಲಿವು ಎಲ್ಲವನ್ನೂ ನೋಡಿದ್ದೇನೆ. ಸಾಕಷ್ಟು ಅನುಭವಿಸಿದ್ದೇನೆ. ಒಂದು ಹಂತದಲ್ಲಿ ಏನೂ ಕೈಹತ್ತುತ್ತಿರಲಿಲ್ಲ. ಆದರೆ, ಆ ಸಮಯದಲ್ಲಿ ನನ್ನನ್ನು ಕಾಪಾಡಿಕೊಂಡು ಬಂದಿದ್ದು ಇದೇ ಪಾಸಿಟಿವಿಟಿ. ನಾವು ಎಷ್ಟು ಪಾಸಿಟಿವ್​ ಆಗಿರುತ್ತೇವೋ, ಅಷ್ಟು ಒಳ್ಳೆಯದು. ನೆಗೆಟಿವ್​ ಯೋಚನೆ ಮಾಡುವುದರಿಂದ ಸಮಸ್ಯೆ ಸಹ ಹೆಚ್ಚುತ್ತದೆ. ಒಬ್ಬ ಮನುಷ್ಯ ತನ್ನ ದಿನದ ಶೇ. 70ರಷ್ಟು ಸಮಯವನ್ನು ನೆಗೆಟಿವ್​ ಆಗಿ ಯೋಚನೆ ಮಾಡುತ್ತಾನೆ ಎಂದು ಒಂದು ವರದಿ ಹೇಳುತ್ತದೆ. ಅದೇ ನಾವು ಶೇ. 70ರಷ್ಟು ಪಾಸಿಟಿವ್​ ಆಗಿ ಯೋಚನೆ ಮಾಡಿದರೆ ಜೀವನ ಎಷ್ಟು ಚೆನ್ನಾಗಿರುತ್ತದೆ, ಅಲ್ಲವೆ? ಹಾಗಾಗಿ, ಮೊದಲು ನಿಮ್ಮಲ್ಲಿ ನೀವು ಸಂತೋಷ ಕಂಡುಕೊಳ್ಳಿ. ಬೇರೆಯವರಿಗೆ ಒಳ್ಳೆಯದನ್ನು ಮಾಡಿ, ಒಳ್ಳೆಯದನ್ನು ಬಯಸಿ. ಬೇರೆಯವರ ಯಶಸ್ಸನ್ನು ಸಂಭ್ರಮಿಸಿ. ಯಾರನ್ನೂ ನೋಡಿ ಹೊಟ್ಟೆಕಿಚ್ಚು ಪಡಬೇಡಿ. ನಮಗಿರುವ 24 ಗಂಟೆಗಳಲ್ಲಿ ಬೇರೆಯವರ, ಬೇರೆಯದರ ಬಗ್ಗೆ ಯೋಚನೆ ಮಾಡಿ ಸಮಯ ಏಕೆ ಹಾಳು ಮಾಡಬೇಕು?

ಮನುಷ್ಯ ಎಂದಮೇಲೆ ಒಳ್ಳೆಯ, ಕೆಟ್ಟ ಯೋಚನೆಗಳು ಸಹಜ. ಯಾವಾಗಲೂ ಒಳ್ಳೆಯ ಯೋಚನೆಗಳನ್ನೇ ಮಾಡುವುದಕ್ಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಬರಬಹುದು. ಸಾಧ್ಯವಿದೆ. ನಾವು ಪಾಸಿಟಿವ್​ ಆಗಿರುವುದು, ಸಂತೋಷವಾಗಿರುವುದಕ್ಕೆ ಯೋಗ ಮತ್ತು ಧ್ಯಾನ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ, ಸಂತೋಷವಾಗಿರುವುದಕ್ಕೆ ಸಾಧ್ಯ. ನಮ್ಮ ದೇಹದಲ್ಲಿರುವ ಏಳು ಚಕ್ರಗಳು ಆಕ್ಟಿವೇಟ್​ ಆಗುವುದೇ ವರ್ಕೌಟ್​ ಮಾಡಿದಾಗ. ನಮ್ಮ ದೊಡ್ಡ ಮಾವ (ಡಾ. ರಾಜಕುಮಾರ್​) ಅಷ್ಟು ವರ್ಷಗಳ ಕಾಲ ಪಾಸಿಟಿವ್​ ಆಗಿರೋದಕ್ಕೆ ಸಾಧ್ಯವಾಗಿದ್ದು ಯೋಗದಿಂದ. ಅವರ ಅಭ್ಯಾಸ, ಯೋಚನೆಗಳು ನಮಗೆಲ್ಲರಿಗೂ ಸ್ಫೂರ್ತಿ. ನಾವೆಲ್ಲ ಕಲಿತಿದ್ದು ಅವರಿಂದಲೇ. ಮುಖ್ಯವಾಗಿ ನಾವು ಓಪನ್​ ಆಗಿರಬೇಕು. ನನಗೆ ಎಲ್ಲ ಗೊತ್ತು ಎಂದರೆ ಏನೂ ಕಲಿಯುವುದಕ್ಕೆ ಸಾಧ್ಯವಿಲ್ಲ. ಸಾಧಕರಿಂದ ನಾವು ಸ್ಫೂರ್ತಿ ಪಡೆಯಬೇಕು. ಆ ಸ್ಫೂರ್ತಿಯಿಂದ ಜೀವನವನ್ನು ಇನ್ನಷ್ಟು ಚೆನ್ನಾಗಿ ನಡೆಸಬೇಕು.

ಮೊದಲಿಗೆ, ನಮಗೆ ಏನು ಹೆಚ್ಚು ತೊಂದರೆ ಕೊಡುತ್ತದೋ, ಅದರ ಬಗ್ಗೆ ಯೋಚಿಸುವುದು ಕಡಿಮೆ ಮಾಡಬೇಕು. ಏಕೆಂದರೆ, ಅದು ತಕ್ಷಣ ಮುಗಿಯುವಂತಹದ್ದಲ್ಲ. ಅದಕ್ಕೆ ಅದರದ್ದೇ ಆದ ಸಮಯ ಇರುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ಭಾನುವಾರ. ಮುಂದಿನ ಭಾನುವಾರ ನನ್ನ ಸಮಸ್ಯೆಗೆ ಒಂದು ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರೆ, ಇವತ್ತಿನಿಂದಲೇ ಯೋಚಿಸುತ್ತಾ ಕುಳಿತರೆ ಏನು ಪ್ರಯೋಜನ? ಇದರಿಂದಾಗಿ, ಈ ನಡುವೆ ನಡೆಯುವ ಒಳ್ಳೆಯ ವಿಚಾರಗಳ ಬಗ್ಗೆ ಗಮನಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಾವು ಮೊದಲು ನಮ್ಮ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕು. ಎಲ್ಲರೂ ಸ್ಟ್ರೆಸ್​ನಿಂದ ಹೊರಬರುವುದಕ್ಕೆ ಧ್ಯಾನ ಅಥವಾ ಯೋಗದ ಮೊರೆ ಹೋಗುತ್ತಾರೆ. ಸುಮ್ಮನೆ ಯೋಗ ಅಥವಾ ಧ್ಯಾನ ಮಾಡುವುದಲ್ಲ. ಅದಕ್ಕೆ ಅದರದೇ ಆದಂತಹ ಒಂದು ಫಾರ್ಮಾಟ್​ ಇರುತ್ತದೆ. ಅದನ್ನು ಅಳವಡಿಸಿಕೊಂಡಾಗ ಮಾತ್ರ ಏನಾದರೂ ಆಗುವುದಕ್ಕೆ ಸಾಧ್ಯ. ಅದೇ ರೀತಿ ನಮ್ಮ ಯೋಚನೆಗಳಿಗೂ ಒಂದು ಾರ್ಮಾಟ್​ ಇರುತ್ತದೆ. ಅದರ ದಾರಿಯಲ್ಲಿ ಹೋದರೆ ಮಾತ್ರ ಏನಾದರೂ ಆಗುವುದಕ್ಕೆ ಸಾಧ್ಯ. ಸುಮ್ಮನೆ ಯೋಚಿಸುತ್ತಾ ಕುಳಿತರೆ ಏನೂ ಆಗದು.

ಇವತ್ತಿಗೆ ಮನುಷ್ಯನ ಆಯುಷ್ಯ ಬಹಳ ಕಡಿಮೆ ಆಗಿದೆ. ಇರುವ ಸಮಯವನ್ನು ನಾವು ಚೆನ್ನಾಗಿ ಕಳೆಯಬೇಕು. ವಯಸ್ಸಾದಂತೆ ನಮ್ಮ ಮನಸ್ಥಿತಿಯೂ ಬದಲಾಗುತ್ತಿರುತ್ತದೆ. 20ರ ವಯಸ್ಸಿನಲ್ಲಿ ನಾವು ಒಂದು ರೀತಿ ಯೋಚಿಸುತ್ತೇವೆ. ಕ್ರಮೇಣ 30, 40 ಬಂದಾಗ ಯೋಚನಾ ಧಾಟಿ ಬದಲಾಗುತ್ತದೆ. 20ರಲ್ಲಿ ನಮ್ಮನ್ನು ಹಿಡಿಯುವವರಿಲ್ಲ. 30ರ ನಂತರ ಕ್ರಮೇಣ ಜವಾಬ್ದಾರಿ ಹೆಚ್ಚುತ್ತದೆ. 40ರ ನಂತರ ಭಯ ... ಈ 30 ವರ್ಷಗಳಲ್ಲಿ ನಮ್ಮ ಯೋಚನೆಯಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ನಾವು 20ರಲ್ಲಿದ್ದಾಗ ಮಾಡುವ ಕೆಲಸ 40ರಲ್ಲಿ ಮಾಡುವುದಕ್ಕೆ ಸಾಧ್ಯ ಇಲ್ಲ. 40ರಲ್ಲಿದ್ದಾಗ ಆಗೇನು ಮಾಡಬೇಕೋ ಅದನ್ನು ಮಾಡಬೇಕು. ಆಗ 20ರ ಯುವಕನ ತರಹ ಆಡುವುದಕ್ಕೆ ಸಾಧ್ಯ ಇಲ್ಲ. ವಯಸ್ಸು ಎನ್ನುವುದು ಬರೀ ಒಂದು ಸಂಖ್ಯೆ ಇರಬಹುದು. ಆದರೆ, ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು.

ಬದುಕೆಂದರೆ ನಾವೊಬ್ಬರೇ ಅಲ್ಲ. ನಮ್ಮ ಸುತ್ತಮುತ್ತ ಹಲವು ಜನರಿರುತ್ತಾರೆ. ನಮ್ಮನ್ನು ನೋಡಿ ಕಲಿಯುವವರಿರುತ್ತಾರೆ. ನಾವು ನೆಗೆಟಿವ್​ ಆಗಿದ್ದರೆ ಅವರೂ ಅದನ್ನು ನೋಡಿ ಕಲಿಯುತ್ತಾರೆ. ನಾವೇನು ಎನ್ನುವುದನ್ನು ತೀರ್ಮಾನ ಮಾಡುವುದು ನಮ್ಮ ಆಯ್ಕೆಗಳು ಮತ್ತು ನಮ್ಮ ಸುತ್ತಲಿನ ಜನ. ಹಾಗಾಗಿ, ನಾವು ಇನ್ನಾದರೂ ಸುಧಾರಿಸದಿದ್ದರೆ ಸಮಸ್ಯೆ. ಇದು 21ನೇ ಶತಮಾನ. ಈಗಲಾದರೂ ಪಾಸಿಟಿವ್​ ಆಗಿ ನಾಲ್ಕು ಜನರಿಗೆ ಒಳ್ಳೆಯದಾಗಿ ಬದುಕೋಣ...

(ಲೇಖಕರು ಖ್ಯಾತ ನಟ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net