ಕುವೆಂಪು ನಗರದಲ್ಲಿ ಬದುಕು ಹಬ್ಬದ ಸಂಭ್ರಮ

kuvempu nagar baduku habba
ಕುವೆಂಪುನಗರದ ಬದುಕು ಹಬ್ಬಕ್ಕೆ ಎತ್ತಿನ ಗಾಡಿಯಲ್ಲಿ ಬಂದ ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ.
Published on

ಶಿವಮೊಗ್ಗ: ಅಳಿವಿನಂಚಿನಲ್ಲಿದ್ದ ರುಬ್ಬುವ ಕಲ್ಲು, ಬೀಸುವ ಕಲ್ಲು, ಒನಕೆ, ಶಾವಿಗೆ ಮಣೆ, ಮೊಸರು ಕಡಗೋಡು, ಸೌದೆ ಒಲೆಗಳ ಪ್ರಾತ್ಯಕ್ಷಿತೆ ಒಂದೆಡೆಯಾದರೆ, ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಚೆನ್ನೆ ಮಣೆ, ಕುಂಟೆ ಪಿಲ್ಲೆ ಸಾಂಪ್ರದಾಯಿಕ ಆಟೋಟಗಳು ಮತ್ತೊಂದಡೆ ಕಣ್ಮನ ಸೆಳೆದವು. ಇಡೀ ಕುವೆಂಪು ನಗರದಲ್ಲಿ ಭಾನುವಾರ ಸಂಜೆ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮಕ್ಕಳಿಂದ ವೃದ್ಧರವರೆಗೂ ಬಡಾವಣೆ ನಿವಾಸಿಗಳು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕುವೆಂಪುನಗರದ ಬದುಕು ಕ್ಷೇಮಾಭಿವೃದ್ಧಿ ಸಂಘದಿಂದ 70ರ ದಶಕದೆಡೆಗೆ ನಮ್ಮ ಪಯಣ ವಿನೂತ ಕಲ್ಪನೆಯಲ್ಲಿ ಬದುಕು ಹಬ್ಬವನ್ನು ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿತ್ತು. 1970-80ರ ದಶಕದ ಜನರ ಜೀವನಶೈಲಿಯನ್ನು ಕಣ್ಮುಂದೆ ತರಿಸಿತು. ರುಬ್ಬುವ ಕಲ್ಲಿನಿಂದ ಹಿಡಿದು ತಲತಲಾರಂತರದಿಂದ ಬಳಕೆ ಮಾಡಿ ಮೂಲೆ ಸೇರಿದ್ದ ಹತ್ತಾರು ಪ್ರಾಚೀನ ವಸ್ತುಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತೆ ಗತಕಾಲಕ್ಕೆ ಕರೆದೊಯ್ಯಿತು.

ಬಡಾವಣೆಯ ಜನರು ವಯಸ್ಸಿನ ಭೇದ ಮರೆತು ಲಗೋರಿ, ಚಿನ್ನಿದಾಂಡು, ಗೋಲಿ, ಬುಗುರಿ, ಚೆನ್ನೆ ಮಣೆ, ಕುಂಟೆ ಪಿಲ್ಲೆ ಮುಂತಾದ ಕ್ರೀಡೆಗಳನ್ನು ಆಡಿದರು. ಎತ್ತಿನ ಗಾಡಿ, ಕುದುರೆ ಗಾಡಿಗಳ ಸವಾರಿ ಮಾಡಿ ಖುಷಿ ಪಟ್ಟರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ ಅವರನ್ನು ಎತ್ತಿನಗಾಡಿ ಮೂಲಕವೇ ಕರೆತರಲಾಯಿತು. ಶಾಸಕರು ಎಂಬುದನ್ನೂ ಮರೆತು ಚನ್ನಬಸಪ್ಪ ಲಗೋರಿ ಆಡಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ವಿಶೇಷವಾಗಿ 1955ರಿಂದ 1970ರ ದಶಕದ ವಿವಿಧ ಹಳೆಯ ಕಾರು, ಜೀಪು ಮುಂತಾದ ವಾಹನಗಳ ಪ್ರದರ್ಶನ ಹಾಗೂ ಕರಾವಳಿ ಕೋಣಗಳಿಂದ ಕಬ್ಬಿನ ಗಾಣದ ಅಲೆಮನೆ ಗಮನ ಸೆಳೆಯಿತು. ತಡರಾತ್ರಿವರೆಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ರಂಜಿಸಿದವು. ಮೊಸರು ಕಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು ನಮ್ಮ ಹಿಂದಿನವರ ಜೀವನಶೈಲಿಯನ್ನು ಈಗಿನ ಮಕ್ಕಳಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಟಿವಿ, ಮೊಬೈಲ್ ನೋಡುವುದು ದುಶ್ಚಟವಾಗಿದ್ದು ಇಂತಹ ಕಾರ್ಯಕಮಗಳಿಂದ ಮನುಷ್ಯರ ಆರೋಗ್ಯ ಸುಧಾರಣೆಯಾಗುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.

ಅಧ್ಯಕತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎನ್.ಪ್ರಸನ್ನ ಮಾತನಾಡಿ, ಬದುಕು ಹಬ್ಬದಲ್ಲಿ 1948ರ ಮಾರಿಸ್ ಕಾರು, 1960ರ ಭಾರತ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ ಬಳಕೆಯಾಗಿದ್ದ ಜೀಪು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಎಂದರು. ಸೂಡಾ ಅಧ್ಯಕ್ಷ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಗೌರವ ಅಧ್ಯಕ್ಷ ರಮೇಶ್ ಬಾಬು, ಕಾರ್ಯದರ್ಶಿ ಡಾ. ರಾಜ್ ಪ್ರಕಾಶ್, ಉಪಾಧ್ಯಕ್ಷರಾದ ವೇದಾನಂದ, ಅನುಷಾ ನವೀನ್, ಮೀರಾ, ವನಿತಾ, ಶ್ವೇತಾ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net