ಶಿವಮೊಗ್ಗದಲ್ಲಿ ಈದ್ ಮೆರವಣಿಗೆ ಸಂಭ್ರಮ

Eid Milad procession
ಈದ್‌ ಮಿಲಾದ್ ಅಂಗವಾಗಿ ಶಿವಮೊಗ್ಗದಲ್ಲಿ ಮುಸ್ಲಿಮರು ಮೆರವಣಿಗೆ ನಡೆಸಿದರು.
Published on

ಶಿವಮೊಗ್ಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಭಾನುವಾರ ಈದ್ ಮಿಲಾದ್ ಮೆರವಣಿಗೆ ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಮಾರ್ಗಮಧ್ಯೆ ಪಾನೀಯ ವಿತರಣೆ ಜತೆಗೆ ಕವ್ವಾಲಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಾವಿರಾರು ಮುಸ್ಲಿಮರು ಮೆರುಗು ನೀಡಿದರು.

ನಗರದ ಗಾಂಧಿಬಜಾರ್ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ಸಿಆರ್‌ಎನ್ ರಸ್ತೆ, ಓಲ್ಡ್ ಬಾರ್ ಲೈನ್, ಪೆನ್ಶನ್ ಮೊಹಲ್ಲಾ, ಬಿ.ಎಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಮೊಹಲ್ಲಾ, ಟ್ಯಾಂಕ್ ಬಂಡ್ ರಸ್ತೆ, ಬಾಪೂಜಿನಗರ ಮುಖ್ಯ ರಸ್ತೆ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತ, ನೆಹರು ರಸ್ತೆ, ಅಮೀರ್ ಅಹಮ್ಮದ್ ರಸ್ತೆ, ಬಿ.ಎಚ್.ರಸ್ತೆ, ಅಶೋಕ ವೃತ್ತ, ಎನ್.ಟಿ.ರಸ್ತೆ, ಗುರುದೇವ ರಸ್ತೆ, ಕ್ಲಾರ್ಕ್‌ಪೇಟೆ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ವೃತ್ತ ತಲುಪಿತು.
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ರಸ್ತೆ ಬದಿಗಳು, ಗಲ್ಲಿ ಗಲ್ಲಿಗಳಲ್ಲಿ ಹಸಿರು-ಬಿಳಿ ಬಂಟಿಂಗ್ಸ್, ಧ್ವಜಗಳನ್ನು ಅಳವಡಿಸಿ ಮೆರವಣಿಗೆಗೆ ಮೆರುಗು ನೀಡಲಾಯಿತು. ಅದರಲ್ಲೂ ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತ ಸೇರಿ ವಿವಿಧ ಬಡಾವಣೆಗಳು, ವೃತ್ತಗಳಲ್ಲಿ ಹಸಿರು ಬಟ್ಟೆ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಸೌಹಾರ್ದವೇ ಹಬ್ಬ ಶಾಂತಿ ನಡಿಗೆ ಕಾರ್ಯಕ್ರಮದಡಿ ವಿವಿಧ ಮುಖಂಡರು ಮಸೀದಿಗಳಿಗೆ ಭೇಟಿ ನೀಡಿ ಮುಸ್ಲಿಮರಿಗೆ ಶುಭಾಶಯ ಕೋರಿದರು.
ಸಂಚಾರ ಸುಗಮಗೊಳಿಸುವ ಸಲುವಾಗಿ ಕೆಲವೆಡೆ ವಾಹನ ಸಂಚಾರ, ನಿಲುಗಡೆ ನಿಷೇಧ ಮತ್ತು ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಬೈಪಾಸ್ ಮಾರ್ಗವಾಗಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರಿಂದ ಸಂಜೆ ನಂತರ ಸಂಚಾರ ದಟ್ಟಣೆ ಉಂಟಾಗಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ 3,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆಯಕಟ್ಟಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು. ಖುದ್ದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net