

ಚೀನಾ: ಗುಂಡಿನ ದಾಳಿಗೆ ಒಳಗಾಗಿ ಸಾವಿಗೀಡಾಗಿರುವ ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಆತ್ಮಕ್ಕೆ ಶಾಂತಿಕೋರಿ ಭಾರತದಲ್ಲಿ ಶೋಕಾಚರಣೆ ಘೋಷಿಸಿದ್ದರೆ, ಅತ್ತ ಚೀನಾದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಅಬೆ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಚೀನಾದ ಸಾಮಾಜಿಕ ಜಾಲತಾಣ ಕೊಂಡಾಡಿ, ಆತನನ್ನು ಹೀರೋ ಎಂದು ಬಣ್ಣಿಸಿದ ಬೆನ್ನಿಗೇ ಮತ್ತೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ.
ಶಿಂಜೋ ಅವರ ಸಾವಿನ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಚೀನಾ ಸಂಭ್ರಮ ವ್ಯಕ್ತಪಡಿಸಿದ್ದು, ಅದರ ಮುಂದುವರಿದ ಭಾಗವಾಗಿ ಇನ್ನಷ್ಟು ವಿಕೃತ ಬೆಳವಣಿಗೆಗಳು ಕಂಡುಬಂದಿವೆ. ಶಿಂಜೋ ಸಾವಿಗೆ ಸಂಭ್ರಮ ವ್ಯಕ್ತಪಡಿಸುವ ಸಲುವಾಗಿ ಚೀನಾದ ನೈಟ್ ಕ್ಲಬ್ಗಳಲ್ಲಿ ಉಚಿತ ಊಟ ಹಾಗೂ ಮದ್ಯ ಪೂರೈಕೆ ಮಾಡಲಾಗುತ್ತಿದೆ.
ಚೀನಾದ ಈ ವಿಕೃತಿಗೆ ಈಗ ಜಗತ್ತಿನಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಇದು ಮೃಗೀಯ ವರ್ತನೆ ಎಂದು ಹೇಳಲಾಗುತ್ತಿದೆ. ಜನಾಂಗೀಯ ದ್ವೇಷ ಇಷ್ಟೊಂದು ಅತಿರೇಕಕ್ಕೆ ಹೋಗಬಾರದು ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದಾರೆ.