ಬ್ಯಾಂಕ್, ಢಾಬಾ, ಬಾರ್ ಇದ್ದ ಬಹುಮಹಡಿ ಕಟ್ಟಡ ಕುಸಿತ!

Building
Published on

ಶಿಮ್ಲಾ: ಮೂರು ಮಹಡಿಯ ಕಟ್ಟಡವೊಂದು ಇಸ್ಪೀಟ್​ ಕಾರ್ಡ್​ನ ಮನೆಯಂತೆ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಇಂಥದ್ದೊಂದು ಪ್ರಕರಣ ನಡೆದಿದೆ. ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಈ ಅವಘಡ ಸಂಭವಿಸಿದೆ.

ಇಲ್ಲಿನ ಚೋಪಲ್ ಮಾರ್ಕೆಟ್​​ನಲ್ಲಿ ಬ್ಯಾಂಕ್​ವೊಂದರ ಶಾಖೆ, ಢಾಬಾ, ಬಾರ್​ ಹಾಗೂ ಇನ್ನಿತರ ಅಂಗಡಿ-ಮುಂಗಟ್ಟುಗಳು ಇದ್ದಿದ್ದ ಈ ಕಟ್ಟಡ ಕುಸಿದು ಬಿದ್ದು ನೆಲಸಮಗೊಂಡಿದ್ದಲ್ಲದೆ, ಭಾಗಶಃ ನೀರಲ್ಲಿ ಕೊಚ್ಚಿಕೊಂಡು ಕೂಡ ಹೋಗಿದೆ.

ಈ ಕಟ್ಟಡದ ಕೊನೆಯ ಮಹಡಿಯಲ್ಲಿ ಯುಕೋ ಬ್ಯಾಂಕ್​ನ ಶಾಖೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಶನಿವಾರವಾದ್ದರಿಂದ ರಜೆ ಇತ್ತು. ಅಲ್ಲದೆ ಶಿಥಿಲಗೊಂಡಿರುವ ಈ ಕಟ್ಟಡದಲ್ಲಿದ್ದವರನ್ನು ಮುಂಜಾಗ್ರತೆ ಕ್ರಮವಾಗಿ ತೆರವುಗೊಳಿಸಲಾಗಿತ್ತು.

ಅದಾಗ್ಯೂ ತಳಮಹಡಿಯಲ್ಲಿದ್ದ ಬಾರ್​ನಲ್ಲಿ ಕುಳಿತಿದ್ದ ಕೆಲವರು ಕಿಟಕಿಯಲ್ಲಿ ಬಿರುಕು ಮೂಡಿದ್ದನ್ನು ಗಮನಿಸಿ, ಕೂಗಿ ಇತರರಿಗೆ ಎಚ್ಚರಿಸುತ್ತ ತಕ್ಷಣ ಅಲ್ಲಿಂದ ಹೊರಗೆ ಓಡಿಬಂದಿದ್ದರು. ಹೀಗಾಗಿ ಒಳಗಿದ್ದ ಎಲ್ಲರೂ ಕೂಡಲೇ ಹೊರಗೆ ಓಡಿಬಂದಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net