

ಶಿವಮೊಗ್ಗ: ಸಮಾಜದಲ್ಲಿನ ಒಳ್ಳೆಯ ಅಂಶಗಳನ್ನು ಕೊಂಡಾಡಲು ಹಾಗೂ ಉತ್ತಮ ಮೌಲ್ಯಗಳನ್ನು ಎತ್ತಿಹಿಡಿಯಲು ಹಬ್ಬಗಳ ಆಚರಣೆ ಮಾಡಬೇಕಿದೆ. ಅವುಗಳಲ್ಲಿನ ಸತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದು ರಂಗಕರ್ಮಿ, ನಿರ್ದೇಶಕ ಎಸ್.ಎನ್.ಸೇತುರಾಮ್ ಹೇಳಿದರು.
ನಗರದ ಬೆಕ್ಕಿನ ಕಲ್ಮಠದಲ್ಲಿ ಭಾನುವಾರ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಅಬ್ಬ..! ಎಷ್ಟೊಂದು ಚಂದ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕವಾಗಿದೆ. ಆದರೆ ಇಂದು ಹಬ್ಬಗಳು ಕಾಟಾಚಾರಕ್ಕೆ, ತೋರಿಕೆಗೆ ಸೀಮಿತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಬ್ಬಗಳು ನಮಗೆ ಊಟದಲ್ಲಿ ಶಿಸ್ತು ಕೊಡುತ್ತಿದ್ದವು. ಈಗ ಆ ಶಿಸ್ತನ್ನು ನಾವು ಕಳೆದುಕೊಂಡಿದ್ದೇವೆ. ಮುಖದಲ್ಲಿ ಹೊಳಪು ಬರಬೇಕಾದರೆ ಮನುಷ್ಯ ಆರೋಗ್ಯವಂತನಾಗಿರಬೇಕು. ನಾವು ಸೇವಿಸುವ ಆಹಾರ ನಮ್ಮನ್ನು ಆರೋಗ್ಯವಂತನಾಗಿಡುತ್ತದೆ ಎಂಬುದು ಬಹಳಷ್ಟು ಜನರು ಮರೆತಿದ್ದಾರೆ. ಥರಾವರಿ ಆಹಾರ ಸೇವನೆಯಿಂದ ಮನಸ್ಸು ಸಂತುಷ್ಟವಾದಾಗ ಒಳಗಿನಿಂದ ಮುಖದಲ್ಲಿ ಹೊಳಪು ಬರಲಿದೆ ಎಂದರು.
ಹಬ್ಬಗಳ ಮೂಲಕ ಶ್ರೀರಾಮನ ಮನಸ್ಥಿತಿಯನ್ನು ಕೊಂಡಾಡುತ್ತೇವೆ. ರಾವಣ ಮನಸ್ಥಿತಿಯನ್ನು ತೆಗಳುತ್ತೇವೆ. ಅಂದರೆ ಒಳ್ಳೆಯದನ್ನು ಮೆರೆಸಲು ಹಾಗೂ ಕೆಟ್ಟದ್ದನ್ನು ಮರೆಸಲು ಹಬ್ಬಗಳ ಆಚರಣೆ ಬೇಕಿದೆ. ಇದು ಭಾರತೀಯ ಸಂಸ್ಕೃತಿಯೂ ಆಗಿದೆ. ಆದರೆ ದೇವರ ವಿಗ್ರಹ ಏನೂ ಅಲ್ಲ. ಅದಕ್ಕೆ ಏನು ಮಾಡಿದರೂ ಏನೂ ಆಗುವುದಿಲ್ಲ ಎನ್ನುವ ಮನಸ್ಥಿತಿ ಸಾಕಷ್ಟು ಜನರಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಮಹಾ ಪೋಷಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದರು.