ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿ ಆಚರಿಸಿ

IMG-20231012-WA0014_2
Published on

ತಿ.ನರಸೀಪುರ: ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕು ಆಡಳಿತ ವಿಜೃಂಭಣೆಯಿಂದ ಆಚರಿಸುವಂತೆ ವಿವಿಧ ಸಮಾಜಗಳ ಮುಖಂಡರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅ.28ರಂದು ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತಂತೆ ಸಮಾಜದ ಮುಖಂಡರ ಅಭಿಪ್ರಾಯ ಪಡೆಯಲು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅಧ್ಯಕ್ಷತೆಯಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಾಯಕ ಸಮಾಜದ ಮುಖಂಡರಲ್ಲದೆ ವಿವಿಧ ಸಮುದಾಯದ ಮುಖಂಡರು ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತೆ ಒತ್ತಾಯಿಸಿದರು.


ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಆಲಗೂಡು ನಾಗರಾಜು ಮಾತನಾಡಿ, ಕರೊನಾ ಹಾಗೂ ಸಮುದಾಯದ ಸ್ವಾಮೀಜಿಗಳು ಧರಣಿ ನಿರತರಾಗಿದ್ದರಿಂದ ಕಳೆದ ಮೂರು ವರ್ಷಗಳಿಂದಲೂ ವಾಲ್ಮೀಕಿ ಜಯಂತಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಅದ್ದೂರಿಯಾಗಿಯೇ ಜಯಂತಿ ಆಚರಿಸಬೇಕು. ಶ್ರೀಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ಮೂಲಕ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ವಿದ್ಯೋದಯ ಕಾಲೇಜು ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಮಾಡುವಂತೆ ಮನವಿ ಮಾಡಿದರು.


ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಹಾಗೂ ಮತ್ತಿತರರಿಗೆ ಮಾಡುತ್ತಿದ್ದ ಸನ್ಮಾನಕ್ಕೆ ತಿಲಾಂಜಲಿ ಇಟ್ಟು 10 ಜನ ನಾಯಕ ಸಮಾಜದ ತರಕಾರಿ ವ್ಯಾಪಾರಸ್ಥರು, ತಳ್ಳುಗಾಡಿ ವ್ಯಾಪಾರಸ್ಥರನ್ನು ಗುರುತಿಸಿ ಸನ್ಮಾನ ಮಾಡುವಂತೆ ಸಲಹೆ ನೀಡಿದರು.


ಮಹರ್ಷಿ ವಾಲ್ಮೀಕಿ ಮೆರವಣಿಗೆಯಲ್ಲಿ ಮಹರ್ಷಿ ಭಾವಚಿತ್ರ ಹೊರತುಪಡಿಸಿ ಸಿನಿಮಾ ನಟರ ಭಾವಚಿತ್ರ ಪ್ರದರ್ಶನ ಮಾಡಲು ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು, ಹದ್ದು ಮೀರಿದರೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.


ತಾಲೂಕು ನಾಯಕರ ಸಂಘದ ಅಧ್ಯಕ್ಷ ಬನ್ನೂರು ಚಿಕ್ಕಯ್ಯ, ಮುಖಂಡ ಘಟಕ ಮಹದೇವ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೆ.ಸಿ.ಲೋಕೇಶ್‌ನಾಯಕ್, ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿದರು.


ನಾಯಕ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರ ಮನವಿ ಆಲಿಸಿದ ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್, ನಿಮ್ಮ ಸಲಹೆಗಳನ್ನು ಸ್ವೀಕರಿಸಿ ನಮ್ಮ ಇತಿಮಿತಿಯೊಳಗೆ ಜಯಂತಿ ಆಚರಣೆ ಮಾಡುತ್ತೇವೆ. ಈ ಬಾರಿ ರಾಷ್ಟ್ರೀಯ ಹಬ್ಬಗಳ ಜಯಂತಿಗೆ ಸರ್ಕಾರ ನೀಡುತ್ತಿದ್ದ ಅನುದಾನ 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗೆ ಏರಿಕೆಯಾಗಿದೆ. ಆದರೂ ಸಮುದಾಯದವರ ಆಶಯದಂತೆ ಜಯಂತಿ ಆಚರಣೆ ಕಡಿಮೆ ಅನುದಾನದಲ್ಲಿ ಮಾಡಲು ಸಾಧ್ಯವಿಲ್ಲ. ಸಮುದಾಯದವರು ನಮ್ಮೊಂದಿಗೆ ಕೈ ಜೋಡಿಸಿದರೆ ತಕ್ಕಮಟ್ಟಿಗೆ ವಿಜೃಂಭಣೆಯಿಂದ ಜಯಂತಿ ಆಚರಣೆ ಮಾಡಬೇಕಾಗಿದೆ ಎಂದರು.


ಇದನ್ನೊಪ್ಪದ ನಾಯಕ ಸಂಘದ ಮಾಜಿ ಅಧ್ಯಕ್ಷ ಹೊನ್ನನಾಯಕ, ಸಮುದಾಯದವರು ನಿಮ್ಮೊಂದಿಗೆ ಕೈಜೋಡಿಸಲು ಸಾಧ್ಯವಿಲ್ಲ. ಹಾಗಿದ್ದರೆ ನಾವೇ ಪ್ರತ್ಯೇಕವಾಗಿ ಜಯಂತಿ ಆಚರಿಸಬಹುದಿತ್ತು. ಇಲಾಖಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಈ ಮೊದಲಿನ ಸಂಪ್ರದಾಯದಂತೆ ಜಯಂತಿ ಆಚರಣೆ ಮಾಡಿ ಎಂದರು.


ಇಲಾಖಾ ಅಧಿಕಾರಿಗಳ ಪ್ರತ್ಯೇಕ ಸಭೆ ಏರ್ಪಡಿಸಿ ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ತಿಳಿಸಿದರು.


ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣ, ಬಿಇಒ ಶೋಭಾ, ಪ.ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಕೋಮಲಾ, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಕೆಂಡಗಣ್ಣಸ್ವಾಮಿ, ಮುಖಂಡರಾದ ಕರೋಹಟ್ಟಿ ಮಹದೇವಯ್ಯ, ಜಿಪಂ ಮಾಜಿ ಸದಸ್ಯೆ ಸುಧಾಮಣಿ, ಬೂದಹಳ್ಳಿ ಸಿದ್ದರಾಜು, ಮೂಗೂರು ಮರಿಸ್ವಾಮಿ, ಸಿದ್ದರಾಜು, ಕೃಷ್ಣ ಮೂರ್ತಿ, ಗೋವಿಂದ, ಕುಕ್ಕೂರು ಶಾಂತರಾಜು, ಸಿ.ಪುಟ್ಟಯ್ಯ, ಇಂಡವಾಳು ಬಸವರಾಜು, ಶಿವಶಂಕರಮೂರ್ತಿ, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net