

ಗ್ರೇಟರ್ ನೋಯ್ಡಾ: ನೆಲದ ಮೇಲೆ ಸೀಲಿಂಗ್ ಗ್ರಿಲ್ ಕುಸಿದ ಪರಿಣಾಮ ಕೆಳಗಿದ್ದ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಗ್ರೇಟರ್ ನೋಯ್ಡಾದ ಬ್ಲೂ ಸಫೈರ್ ಮಾಲ್ನಲ್ಲಿ ವರದಿಯಾಗಿದೆ.
35 ವರ್ಷ ವಯಸ್ಸಿನ ಹರೇಂದ್ರ ಭಾಟಿ ಮತ್ತು ಶಕೀಲ್ ಎಂದು ಗುರುತಿಸಲಾದ ಇಬ್ಬರ ಮೇಲೆ ಸೀಲಿಂಗ್ ಗ್ರಿಲ್ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಿಬ್ಬರು ಗಾಜಿಯಾಬಾದ್ ಮೂಲದವರು ಎಂದು ಹೇಳಲಾಗಿದ್ದು, ಘಟನೆಯು ಮಾಲ್‌ಗೆ ತೆರಳುವವರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಾಲ್‌ನ ಐದನೇ ಮಹಡಿಯಿಂದ ಕಬ್ಬಿಣದ ಗ್ರಿಲ್ ಬಿದ್ದಿದೆ ಎಂದು ಹೆಚ್ಚುವರಿ ಡಿಸಿಪಿ ಹೃದೇಶ್ ಕಠಾರಿಯಾ ತಿಳಿಸಿದ್ದಾರೆ. ಇಬ್ಬರು ಬಲಿಪಶುಗಳು ಎಸ್ಕಲೇಟರ್ ಕಡೆಗೆ ಹೋಗುತ್ತಿದ್ದಾಗ ಫೆನ್ಸಿಂಗ್ ಉದ್ದೇಶಕ್ಕಾಗಿ ಬಳಸಿದ ಗ್ರಿಲ್ ಇದ್ದಕ್ಕಿದ್ದಂತೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).