ಇಡೀ ದೇಶದ ಅಶ್ರುತರ್ಪಣದ ನಡುವೆ ಜನರಲ್​ ಬಿಪಿನ್​ ರಾವತ್​ ಅಂತ್ಯಕ್ರಿಯೆ

gen
Published on

ನವದೆಹಲಿ: ಭಾರತದ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್​ ಬಿಪಿನ್​ ರಾವತ್​ ಅವರ ಅಂತ್ಯಸಂಸ್ಕಾರವು ಶುಕ್ರವಾರ ಸಂಜೆಯ ವೇಳೆಗೆ ದೆಹಲಿ ಕಂಟೋನ್​ಮೆಂಟಿನಲ್ಲಿರುವ ಬ್ರಾರ್​ ಸ್ಕ್ವೇರ್​ ಕ್ರೆಮೆಟೋರಿಯಂನಲ್ಲಿ ನಡೆಯಿತು. ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಜನರಲ್​ ರಾವತ್​ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಅವರ ಅಂತ್ಯಕ್ರಿಯೆಯನ್ನು ಒಂದೇ ಜಾಗದಲ್ಲಿ ನೆರವೇರಿಸಲಾಯಿತು. ಅವರ ಚಿತೆಗೆ ಪುತ್ರಿಯರಾದ ಕ್ರಿತಿಕಾ ಮತ್ತು ತಾರಿಣಿ ಅಗ್ನಿಶಾಸ್ತ್ರ ಮಾಡಿದರು.

ಇಡೀ ದೇಶವೇ ಶೋಕದಲ್ಲಿ ಮುಳುಗಿ ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​(ಸಿಡಿಎಸ್​) ಜನರಲ್​ ಬಿಪಿನ್​ ರಾವತ್​​ ಅವರಿಗೆ ಅಂತಿಮ ವಿದಾಯ ಸೂಚಿಸಿದೆ. ಇಂದು ಮಧ್ಯಾಹ್ನ ಅವರ ನಿವಾಸದಿಂದ ರಾವತ್​​ ದಂಪತಿಗಳ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವದೊಂದಿಗೆ, ಮೆರವಣಿಗೆಯಲ್ಲಿ ಬ್ರಾರ್​ ಸ್ಕ್ವೇರ್​​ ಸ್ಮಶಾನಕ್ಕೆ ತರಲಾಯಿತು. ಅಂತ್ಯಕ್ರಿಯೆಯ ಸಮಯಕ್ಕೆ ದೇಶದ ವೀರ ಸೇನಾನಿ ಜ.ರಾವತ್​ಗೆ​ ಸೇನೆಯ ಪರವಾಗಿ 17 ತೋಪುಗಳ ಸಲ್ಯೂಟ್​​(ಕುಶಾಲತೋಪು) ನೀಡಿ ಗೌರವ ಅರ್ಪಿಸಲಾಯಿತು.

ದಿವಂಗತ ರಾವತ್​ ಅವರ ಚಿತಾಭಸ್ಮವನ್ನು ಅವರ ಕುಟುಂಬಸ್ಥರು ಶನಿವಾರದಂದು ಹರಿದ್ವಾರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net