

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ತಿನ್ನಲು ಕೊಡುವ ವಿಚಾರವಾಗಿ ಹಲವು ಧಾರ್ಮಿಕ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೊಟ್ಟೆ ಕೊಡುವುದು ಕೆಲ ಸಮಾಜಕ್ಕೆ ನೋವು ತರುತ್ತೆ ಅಂದ್ರೆ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಕರಂದ್ಲಾಜೆ, ಮಕ್ಕಳ ಆಹಾರವನ್ನು ತಾಯಿಗೆ ಬಿಡಬೇಕು. ತಾಯಿಗಿಂತ ಮಕ್ಕಳನ್ನು ಚೆನ್ನಾಗಿ ಯಾರೂ ನೋಡಿಕೊಳ್ಳಲ್ಲ. ಮೊಟ್ಟೆ ಬದಲು ಆ ತಾಯಿ ಕೈಗೆ ದುಡ್ಡು ಕೊಟ್ಟರೆ, ಇನ್ನೂ ಚೆನ್ನಾಗಿ ಆಹಾರವನ್ನ ಹಾಕಬಹುದು. ಈ ಬಗ್ಗೆಯೂ ಚರ್ಚೆ ಆಗಬೇಕು ಎಂದರು.
ಆಹಾರ ಪದ್ದತಿ ಏನಿದ್ದರೂ ಅವರವರ ಆಯ್ಕೆ. ಇದಕ್ಕೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ, ಯಾವುದೇ ವ್ಯಕ್ತಿಗಳು ಒತ್ತಡ ತಂದು ಬದಲಾಯಿಸಲು ಆಗುವುದಿಲ್ಲ. ಮೊಟ್ಟೆ ಕೊಡುವುದು ಕೆಲ ಸಮಾಜಕ್ಕೆ ನೋವು ತರುತ್ತೆ ಅಂದ್ರೆ ಸರ್ಕಾರ ಮರುಪರಿಶೀಲನೆ ಮಾಡಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.