

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರವಾಗಿ ಇಂದು ರಾಜ್ಯ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯನ್ನು ಪ್ರಶ್ನಿಸಿರುವ ಸಂತ್ರಸ್ತ ಯುವತಿಯ ಅರ್ಜಿಯೂ ಸೇರಿದಂತೆ 5 ಅರ್ಜಿಗಳ ವಿಚಾರಣೆ ನ್ಯಾಯಾಲಯದ ಮುಂದಿದ್ದು, ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಮಧ್ಯಂತರ ಆದೇಶವನ್ನು ಮುಂದುವರಿಸಲಾಯಿತು.
ಯುವತಿ ಪರ ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಹಾಜರಾದರೆ, ರಮೇಶ್ ಜಾರಕಿಹೊಳಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಜರಾದರು. ಸರ್ಕಾರದ ಪರವಾಗಿ ಹಾಜರಾದ ಎಜಿ ಪ್ರಭುಲಿಂಗ ನಾವದಗಿ ಅವರು. ಪ್ರಕರಣದಲ್ಲಿ ಕಾನೂನು ಪ್ರಕಾರ ತನಿಖೆ ಮುಕ್ತಾಯವಾಗಿದೆ. ಸಿಆರ್ಪಿಸಿ ಪ್ರಕಾರ ಅಂತಿಮ ವರದಿ ಸಲ್ಲಿಸಲು ಅವಕಾಶ ನೀಡಿ ಎಂದು ಕೋರಿದರು.
ಇದಕ್ಕೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿ, ಹೈಕೋರ್ಟ್ ಎಸ್ಐಟಿ ರಚನೆಗೆ ಸೂಚಿಸಿಲ್ಲ. ಯುವತಿ ಎಸ್ಐಟಿ ರಚನೆಯನ್ನು ಪ್ರಶ್ನಿಸಿದ್ದಾಳೆ. ಹೀಗಿರುವಾಗ ತರಾತುರಿಯಲ್ಲಿ ಅಂತಿಮ ವರದಿ ಸಲ್ಲಿಕೆ ಅವಶ್ಯಕತೆ ಏನು? ಪ್ರಕರಣದ ತನಿಖೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಎಸ್ಐಟಿಯ ಮೇಲೆ ನಮಗೆ ನಂಬಿಕೆ ಇಲ್ಲ ಎಂದರು. ಎಸ್ಐಟಿ ತನಿಖಾ ವರದಿ ಈಗಾಗಲೇ ಸೋರಿಕೆಯಾಗಿದೆ. ಅದರಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದಂತಿದೆ. ತನಿಖಾ ವರದಿ ಸೋರಿಕೆ ಬಗ್ಗೆಯೂ ತನಿಖೆಯಾಗಬೇಕು. ಎಸ್ಐಟಿ ತನಿಖೆ ರದ್ದುಪಡಿಸಲು ನಾವು ಮನವಿ ಮಾಡಿದ್ದೇವೆ ಎಂದು ಜೈಸಿಂಗ್ ಹೇಳಿದರು.
ಹಂಗಾಮಿ ಸಿಜೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಪೀಠವು, ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಿ, ಮಧ್ಯಂತರ ಆದೇಶವನ್ನು ಮುಂದುವರಿಸಿತು. ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ಮೂಂದೂಡಿತು.