

ಬೆಂಗಳೂರು: ವಿದ್ಯಾರ್ಥಿನಿಯರ ಮೇಲೆ ಕಾಲೇಜು ಕ್ಯಾಂಪಸ್‌ಗಳಲ್ಲಿಯೇ ಲೈಂಗಿಕ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ವು ಇಂತಹ ದುರ್ವರ್ತನೆಗಳಿಕೆ ಕಡಿವಾಣ ಹಾಕಲು ತನ್ನ ಸಂಯೋಜಿತ ಎಲ್ಲಾ ಕಾಲೇಜುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯ ಮಾಡಿದೆ.
ಇತ್ತಿಚೆಗೆ ಉನ್ನತ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ತನ್ನಲ್ಲಿ ಸಂಯೋಜಿತ ಎಲ್ಲಾ ಕಾಲೇಜುಗಳ ಪ್ರಮುಖ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಮಾದಕ ದೃವ್ಯ ಸೇವನೆ, ಧೂಮಪಾನ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ಯಾಂಪಸ್‌ಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ಕಡ್ಡಾಯ ಮಾಡಿತ್ತು.
ಕ್ಯಾಂಪಸ್‌ಗೆ ಪ್ರವೇಶ, ನಿರ್ಗಮನ, ಕಾರಿಡಾರ್ ಸೇರಿ ಪ್ರಮುಖ ಸ್ಥಳಗಳು ಸೆರೆಯಾಗುವಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸೆರೆಯಾದ ದೃಶ್ಯಗಳ ಮೇಲೆ ನಿರಂತರ ನಿಗಾ ಇರಿಸಬೇಕು ಮತ್ತು ಭದ್ರತಾ ಲೋಪಗಳು ಘಟಿಸಿದಾಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರ್‌ಜಿಯುಎಚ್‌ಎಸ್ ಕಾಲೇಜುಗಳಿಗೆ ಸೂಚಿಸಿದೆ.
ಕ್ಯಾಂಪಸ್‌ನ ಎಲ್ಲ ಜಾಗಗಳು, ಮೆಟ್ಟಿಲುಗಳು, ನಿರ್ಜನ ಮತ್ತು ಡೆಡ್ ಎಂಡ್ ಪ್ರದೇಶಗಳಿಗೆ ಸದಾ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಬೆಳಕಿನ ವ್ಯವಸ್ಥೆಯ ಮೇಲೆ ಸದಾ ಕಣ್ಣಿಡಬೇಕು. ವಿದ್ಯಾರ್ಥಿನಿಯರು ಮತ್ತು ಮಹಿಳಾ ಸಿಬ್ಬಂದಿಗೆ ಘನತೆ ಮತ್ತು ಗೌರವಯುತ ಕಾರ್ಯನಿರ್ವಹಣೆಯ ವಾತಾವರಣ ಸೃಷ್ಟಿಸಬೇಕು, ಯಾವುದೇ ಕಿರುಕುಳ ಅಥವಾ ದುರ್ವರ್ತನೆ ಪ್ರಕರಣಗಳನ್ನು ತಕ್ಷಣವೇ ಸಂಸ್ಥೆಯ ಮತ್ತು ಕಾನೂನಿನ ನಿಯಮಗಳಡಿ ನಿರ್ವಹಿಸಬೇಕು. ಮಹಿಳೆಯರಿಗೆ ಸುರಕ್ಷಿತ, ಒಳಗೊಳ್ಳುವ, ನ್ಯಾಯಯುತ ಕೆಲಸದ ವ್ಯವಸ್ಥೆಗಳನ್ನು ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಮಹಿಳೆಯರ ಸುರಕ್ಷತೆಯ ಬಗ್ಗೆ ವರದಿ ಅಥವಾ ದೂರು ನೀಡಲು ಸ್ಪಷ್ಟ ವ್ಯವಸ್ಥೆಯನ್ನು ರೂಪಿಸಿ ಈ ಬಗ್ಗೆ ಮಹಿಳಾ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರತಿ ಸಂಸ್ಥೆಯು ಸಂಸ್ಥೆಯ ಮುಖ್ಯಸ್ಥರು, ಮಹಿಳಾ ಹಾಸ್ಟೆಲ್ನ ವಾರ್ಡನ್, ಕುಲಸಚಿವರು ಮತ್ತು ಇತರ ಹಿರಿಯ ಅಧಿಕಾರಿಯನ್ನು ಹೊಂದಿರುವ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಕ್ಯಾಂಪಸ್‌ನ ಸುರಕ್ಷತಾ ಕ್ರಮಗಳ ಬಗ್ಗೆ ಪರಾಮರ್ಶೆ ಮಾಡಿ ಪ್ರತಿ ತ್ರೈಮಾಸಿಕದ ಕೊನೆಗೆ ಸಮಗ್ರ ವರದಿಯನ್ನು ಆರ್‌ಜಿಯುಎಚ್ಎಸ್‌ಗೆ ಸಲ್ಲಿಸಬೇಕು. ಆರ್ ಜಿಯುಎಚ್ಎಸ್‌ನ ಪಾಶ್ ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಈ ಎಲ್ಲ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ. ಸಂಸ್ಥೆಗಳ ಮುಖ್ಯಸ್ಥರು ತಮ್ಮ ಕ್ಯಾಂಪಸ್ ನಲ್ಲಿ ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಖಾತರಿ ಪಡಿಸಬೇಕು ಎಂದು ಆರ್‌ಜಿಯುಎಚ್ಎಸ್ ಹೇಳಿದೆ.
700ಕ್ಕೂ ಹೆಚ್ಚು ಕಾಲೇಜು
ಆರ್‌ಜಿಯುಎಚ್ಎಸ್ ನಲ್ಲಿ ಸಂಯೋಜನೆ ಗೊಂಡಿರುವ 700ಕ್ಕೂ ಅಧಿಕ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ, ಯೋಗಶಿಕ್ಷಣ, ಯುನಾನಿ, ಫಾರ್ಮಸಿ, ನರ್ಸಿಂಗ್, ಫಿಜಿಯೊಥೆರಪಿ, ಅರೆ ವೈದ್ಯಕೀಯ ಕಾಲೇಜುಗಳಿವೆ.