ನಟಿ ರಶ್ಮಿಕಾ ಮಂದಣ್ಣಗೆ ಬೆದರಿಕೆ ಆರೋಪ; ಶಾಸಕ ರವಿ ಗಣಿಗ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Rashmika Ravi Ganiga
Published on

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಗೈರಾಗಿದ್ದಕ್ಕೆ ಕೈ ಶಾಸಕ ರವಿ ಗಣಿಗ ಸರಣಿ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಟಿ ರಶ್ಮಿಕಾ ವಿರುದ್ಧ ಹೇಳಿಕೆ ನೀಡಿದ ಸಂಬಂಧ ಶಾಸಕ ರವಿ ಗಣಿಗ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ಈ ಹಿಂದೆ ರಶ್ಮಿಕಾ ಮಂದಣ್ಣ (Rashmika Mandanna) ವಿರುದ್ಧ ಕಾಂಗ್ರೆಸ್ ಶಾಸಕ ರವಿ ಗಣಿಗೆ ಸರಣಿ ಹೇಳಿಕೆಗಳನ್ನು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೊಡವ ನ್ಯಾಷನಲ್​​ ಕೌನ್ಸಿಲ್ ರಶ್ಮಿಕಾರನ್ನು ಬೆಂಬಲಿಸಿ ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ದೂರು ನೀಡಿದ್ದರು. ಇದೀಗ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಿಎನ್​ಸಿ ಸದಸ್ಯರು ದೂರು ನೀಡಿದ್ದು, ಕಾಂಗ್ರೆಸ್ ಶಾಸಕನ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಸಮರ್ಥಿಸಿಕೊಳ್ಳುವ ಭರದಲ್ಲಿ ವಿವಾದ

ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಅವರು ನಟ್ಟು ಬೋಲ್ಟ್ ಟೈಟ್​ ಹೇಳಿಕೆ ನೀಡುವ ಮೂಲಕ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಡಿಸಿಎಂ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ ರವಿ ಗಣಿಗ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸಿನಿಮಾದವರಿಗೆ ಜವಾಬ್ದಾರಿ ಇಲ್ಲ. ಕಳೆದ ವರ್ಷ ಸಿನಿಮೋತ್ಸವ ಉದ್ಘಾಟನೆಗೆ ರಶ್ಮಿಕಾಗೆ ಆಹ್ವಾನ ನೀಡಲಾಗಿತ್ತಂತೆ. ನಮ್ಮ ಜನರು ಹತ್ತು ಬಾರಿ ಅವರ ಮನೆಗೆ ಅಲೆದಾಡಿದ್ದರು. ಆದ್ರೆ ಅವರು ಬರಲಿಲ್ಲ. ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಿದ್ದೆವು. ಆದರೆ ನಾನು ಇರೋದು ಹೈದರಾಬಾದ್​​ನಲ್ಲಿ. ನನ್ನ ಮನೆ ಇಲ್ಲೇ ಇದೆ. ಕರ್ನಾಟಕ ಎಲ್ಲಿದೆ ನನಗೆ ಗೊತ್ತಿಲ್ಲ. ನನಗೆ ಟೈಮ್ ಇಲ್ಲ, ನಾನು ಬರಲ್ಲ ಎಂದು ರಶ್ಮಿಕಾ ಹೇಳಿದ್ರು. ಇದನ್ನೆಲ್ಲಾ ನೋಡಿ ಸುಮ್ನೆ ಇರ್ಬೇಕಾ ಎಂದು ಶಾಸಕ ರವಿ ಗಣಿಗ ವಾಗ್ದಾಳಿ ನಡೆಸಿದ್ದರು.

Rashmika Mandanna

ಸುಮೋಟೋ ಕೇಸ್ ದಾಖಲಿಸಿ

ಶಾಸಕ ರವಿ ಗಣಿಗೆ ಹೇಳಿಕೆ ಬೆನ್ನಲ್ಲೇ ರಾಜ್ಯ ಹಾಗೂ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದ ಸಿಎನ್​ಸಿ ಅಧ್ಯಕ್ಷ ನಾಚಪ್ಪ ರಶ್ಮಿಕಾ ಮಂದಣ್ಣ ಅವರು ನಮ್ಮ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ಅವರಿಂದು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ನಟಿಯ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನ ತಿಳಿಯದ ಕೆಲವರು ವಿನಾಕಾರಣ ಟೀಕೆ ಮಾಡುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇದು ಘೋರ ಮಾತ್ರವಲ್ಲದೆ ಬೆದರಿಕೆಗೆ ಸಮ ಎಂದು ಆರೋಪಿಸಿದ್ದರು.

ರಶ್ಮಿಕಾ ಮಂದಣ್ಣ ಭಾರತೀಯ ಚಲನಚಿತ್ರರಂಗಕ್ಕೆ ಸಿಕ್ಕಿರುವ ಅಪೂರ್ವ ಕೊಡುಗೆ. ಅವರು ಶ್ರೇಷ್ಠ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಟಿ ಸ್ವಂತ ನಿರ್ಧಾರ ಹಾಗೂ ಆಕೆಯ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವೆಲ್ಲರೂ ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ರಶ್ಮಿಕಾ (Rashmika Mandanna)  ಅವರು ಕೊಡವ ಸಮಾಜಕ್ಕೆ ಸೇರಿರುವ ಕಾರಣದಿಂದಲೇ ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ ಎಂಬ ಅರ್ಥ ಬರುತ್ತದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸಿದ್ದರು.

ಇದೀಗ ನಟಿಯ ವಿರುದ್ಧ ಹೇಳಿಕೆ ನೀಡಿರುವ ಶಾಸಕ ರವಿ ಗಣಿಗ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕೆಂದು ಸಿಎನ್​ಸಿ ಸದ್ಯಸರು ಆಗ್ರಹಿಸಿದ್ದು, ಈ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ವಿಚಾರ ಮತ್ತಷ್ಟು ವಿವಾದವಾಗುವ ಸಾಧ್ಯತೆಯಿದ್ದು, ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net