

ಬೆಂಗಳೂರು: ನಕಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಪಾನ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಸಚಿವರೊಬ್ಬರ ಆಪ್ತ ಎನ್ನಲಾದ ವ್ಯಕ್ತಿ ಸೇರಿಗೆ ಸೇರಿದ ಕಚೇರಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸುಲ್ತಾನಪಾಳ್ಯ ಮುಖ್ಯರಸ್ತೆ ಕನಕನಗರದಲ್ಲಿರುವ ಎಂ.ಎಸ್.ಎಲ್ ಟೆಕ್ನೋ ಸಲೂಷನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸುತ್ತಿದ್ದ ಸಹಚರರಾದ ಭಗತ್ ಹಾಗೂ ರಾಘವೇಂದ್ರ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನೋಟಿಸ್ ನೀಡಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ದಾಖಲಾತಿಗಳನ್ನು ಮಾಡಿಕೊಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಅ.೧೯ ರಂದು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯ, ಸುಲ್ತಾನಪಾಳ್ಯ ಮುಖ್ಯರಸ್ತೆ ಕನಕನಗರದಲ್ಲಿರುವ ಎಂ.ಎಸ್.ಎಲ್ ಟೆಕ್ನೋ ಸಲೂಷನ್ಸ್ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್, ಆಧಾರ್ ಕಾರ್ಡ್, ವೋಟರ್ ಐಡಿ, ಡಿಎಲ್ ಹಾಗೂ ಪ್ಯಾನ್ ಕಾರ್ಡ್ ತಯಾರು ಮಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ಹಲವಾರು ವಸ್ತುಗಳು ಜಪ್ತಿ ಮಾಡಿದ್ದಾರೆ.
ಅಸಲಿ ಗುರುತಿನ ಚೀಟಿಗಳೆಂದು ನಂಬಿಸುತ್ತಿದ್ದ:
ಮೌನೇಶ್ ಕುಮಾರ್ ಗುರುತಿನ ಚೀಟಿಗಳಾದ ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳನ್ನು ತಮ್ಮ ಶಾಪ್‌ನಲ್ಲಿನ ಕಂಪ್ಯೂಟರ್‌ಗಳಲ್ಲಿ ನಕಲಿಯಾಗಿ ಸೃಷ್ಟಿಸಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಸಹಕರಿಸಿ ಅಸಲಿ ಗುರುತಿನ ಚೀಟಿಗಳೆಂದು ನಂಬಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಸಿಸಿಬಿಯವರು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಹೆಬ್ಬಾಳ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮೌನೇಶ್ ಕುಮಾರ್ ಹಾಗೂ ಭಗತ್ ಸ್ನೇಹಿತರಾಗಿದ್ದು, ರಾಯಚೂರು ಮೂಲದವರು. ಇಬ್ಬರು ಕಂಪ್ಯೂಟರ್ ಇಂಜಿನಿಯರಿಂಗ್ ಓದಿದ್ದಾರೆ. ಭಗತ್, ಮೌನೇಶ್‌ನ ಆಪ್ತನಾಗಿದ್ದಾನೆ. ಇವರು ಮೂವರು ಕಳೆದ ಎರಡ್ಮೂರು ವರ್ಷಗಳಿಂದ ಕಿಯೋನಿಕ್ಸ್ ಮಾದರಿಯ ಸೆಂಟರ್ ತೆರೆದು. ವೋಟರ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್ ಕೇಳಿಕೊಂಡು ಬಂದವರಿಗೆ ೆಟೋ ಶಾಪಿಯಲ್ಲಿ ನಕಲಿ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
ಮೌನೇಶ್ ಸಚಿವರ ಬೆಂಬಲಿಗ!
ಮೌನೇಶ್‌ಕುಮಾರ್ ಸಚಿವ ಭೈರತಿ ಸುರೇಶ್ ಅವರ ಬೆಂಬಲಿಗನಾಗಿ ಗುರುತಿಸಿಕೊಂಡಿದ್ದು, ಕನಕನಗರದಲ್ಲಿ ಎಂಎಸ್‌ಎಲ್ ಟೆಕ್ನೋ ಸಲ್ಯೂಶನ್ ಎಂಬ ಕಚೇರಿ ನಡೆಸುತ್ತಿದ್ದಾನೆ. ಇದೇ ಕಚೇರಿ ಮೇಲೆ ಸಿಸಿಬಿ ಅಧಿಕಾಗಳು ದಾಳಿ ನಡೆಸಿ ಮೌನೇಶ್ ಕುಮಾರ್ ಹಾಗೂ ಭಗತ್ ಮತ್ತು ರಾಘವೇಂದ್ರನನ್ನು ವಶಕ್ಕೆ ಪಡೆದಿದ್ದರು. ಮೌನೇಶ್‌ಕುಮಾರ್ ಸಚಿವ ಭೈರತಿ ಸುರೇಶ್ ಅವರ ಅವರೊಂದಿಗೆ ತೆಗೆಸಿಕೊಂಡಿರುವ ೆಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿವಾದಕ್ಕೆ ಕಾರಣದ ಪ್ರಕರಣ:
ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಕಲಿ ಮತದಾರರ ಗುರುತಿನ ಪತ್ರ ಪ್ರಕರಣ ಬಹಿರಂಗವಾಗಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಚಿಲುಮೆ ಸಂಸ್ಥೆ ಹೆಸರಿನಲ್ಲಿ ವೋಟರ್ ಐಡಿಯಿಂದ ಹೆಸರುಗಳನ್ನು ಡಿಲೀಟ್ ಮಾಡಿದ್ದ ಆರೋಪ ಕೇಳಿಬಂದಿತ್ತು. ಈಗ ನಕಲಿ ವೋಟರ್ ಐಡಿ ಆರೋಪ ಕೇಳಿಬಂದಿದೆ. ಮೌನೇಶ್ ಕುಮಾರ್ ಹಣ ನೀಡಿದರೆ ನಕಲಿ ವೋಟರ್ ಐಡಿ, ಆಧಾರ್ ಮತ್ತು ಡಿಎಲ್ ಮಾಡಿಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಕಚೇರಿಯಲ್ಲಿ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ವೋಟರ್ ಐಡಿ, ಯಾವುದೇ ಆಧಾರ್ ಕೇಳಿದರೂ ಮಾಡಿಕೊಡುತ್ತಿದ್ದ ಎನ್ನಲಾಗಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ರೀತಿಯ ನಕಲಿ ಆಧಾರ್ ಮತ್ತು ವೋಟರ್ ಐಡಿ ಮಾಡಿಕೊಡುವ ಜಾಲ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.