ವೇಶ್ಯೆ ಸಂಗ ಬಯಸಿ ಸಿಕ್ಕಿಬಿದ್ದ ಟೆಕ್ಕಿ! ಮುರಿದು ಬಿದ್ದ ಮದುವೆ

Techie
Published on

ಬೆಂಗಳೂರು: ವೇಶ್ಯೆ ಸಂಗ ಬಯಸಿ ಹೋದ ಟೆಕ್ಕಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಈ ವಿಚಾರ ಆತ ಮದುವೆಯಾಗಬೇಕಿದ್ದ ಯುವತಿ ಮನೆಯವರಿಗೆ ತಿಳಿದು ಸದ್ಯದಲ್ಲೇ ನಿಗದಿಯಾಗಿದ್ದ ನಿಶ್ಚಿತಾರ್ಥವೂ ಮುರಿದುಬಿದ್ದಿದೆ. ಇದೇ ಪ್ರಕರಣದಲ್ಲಿ ಟೆಕ್ಕಿ ಸೇರಿ ಮೂವರನ್ನು ಬಂಧಿಸಲಾಗಿದೆ.

ಹೊಂಗಸಂದ್ರದ ಕರಿಷ್ಮಾ ಶೇಖ್ ಅಲಿಯಾಸ್ ಮುಸ್ಕಾನ್, ಶಾಂತಿಪುರದ ಸೂರಜ್ ಶಾಹಜೀ ಹಾಗೂ ಬೆಳ್ತಂಗಡಿ ಮೂಲದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಬಂಧಿತ. ಠಾಣಾ ಜಾಮೀನನ ಮೇಲೆ ಟೆಕ್ಕಿಯನ್ನು ಬಿಡುಗಡೆ ಮಾಡಲಾಗಿದೆ.

ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಮಾಹಿತಿ ಮೇರೆಗೆ ಶುಕ್ರವಾರ ಸಿಸಿಬಿ ಡಿಸಿಪಿ ಅಬ್ದುಲ್ ಅಹದ್ ಮಾರ್ಗದರ್ಶನದಲ್ಲಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಚ್.ಎನ್.ಧರ್ಮೇಂದ್ರ ನೇತೃತ್ವದ ತಂಡ ಬೊಮ್ಮನಹಳ್ಳಿಯ ಮನೆ ಮೇಲೆ ದಾಳಿ ನಡೆಸಿದ್ದರು. ಅಲ್ಲಿದ್ದ 15 ಮತ್ತು 16 ವಯಸ್ಸಿನ ಇಬ್ಬರು ಬಾಲಕಿಯರನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳದವರು. ಹಲವು ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗ ಅರಸಿಕೊಂಡು ಬಂದಿದ್ದು, ನಂತರ ವೇಶ್ಯಾವಾಟಿಕೆ ದಂಧೆಗಿಳಿದಿದ್ದರು. ಮನೆ ಬಾಡಿಗೆ ಪಡೆದು ತಮ್ಮ ದಂಧೆಯನ್ನು ನಡೆಸುತ್ತಿದ್ದರು. ಕೆಲ ದಿನಗಳ ಹಿಂದೆ ಬಾಂಗ್ಲಾ ದೇಶದ ಇಬ್ಬರು ಬಾಲಕಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ದಾಳಿ ನಡೆಸಲಾಗಿದ್ದು, ಈ ವೇಳೆ ಗ್ರಾಹಕ ಟೆಕ್ಕಿ ಕೂಡ ಸಿಕ್ಕಿಬಿದ್ದಿದ್ದ. ಆ ಮನೆಗೆ ಆತ ಎರಡನೇ ಬಾರಿ ಬಂದಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಇನ್ನು ಆರಂಭದಲ್ಲಿ ತಾವು ಪಶ್ಚಿಮ ಬಂಗಾಳ ರಾಜ್ಯದವರು ಎಂದು ಸಂತ್ರಸ್ತೆಯರು ಹೇಳಿದ್ದರು. ಇದಕ್ಕೆ ಪೂರಕವಾದ ಆಧಾರ್ ಸೇರಿ ಇತರೆ ದಾಖಲೆಗಳನ್ನು ನೀಡಿದರು. ಆದರೆ ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆ ಬಾಲಕಿಯರು ಬಾಂಗ್ಲಾ ದೇಶದ ವಲಸಿಗರು ಎಂಬುದು ಖಚಿತವಾಗಿದೆ. ಪೋಕ್ಸೋ ಕಾಯ್ದೆಯಡಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತೆಯರೇ ಬೇಕೆಂದು ಕೇಳಿದ್ದ

ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆ ಹಿನ್ನೆಲೆಯಲ್ಲಿ ವೇಶ್ಯಾವಾಟಿಕೆ ದಂಧೆಕೋರಳಾಗಿರುವ ಕರಿಷ್ಮಾಳ ಪೂರ್ವಾಪರ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸಾಫ್ಟ್​ವೇರ್ ಉದ್ಯೋಗಿ, ಅಪ್ರಾಪ್ತೆಯರೇ ಬೇಕೆಂದು ಸೂರಜ್ ಮತ್ತು ಕರೀಷ್ಮಾ ಬಳಿ ಬೇಡಿಕೆ ಇಟ್ಟಿದ್ದ. ಹೀಗಾಗಿ ಆರೋಪಿಗಳು ಇಬ್ಬರು ಅಪ್ರಾಪ್ತೆಯರನ್ನು ಕರೆಸಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net