

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ನಟ-ನಟಿಯರು ಮಾತ್ರವಲ್ಲ ರಾಜಕಾರಣಿಗಳ ಕೊರಳಿಗೆ ಡ್ರಗ್ಸ್ ಉರುಳು ಸುತ್ತಿಕೊಳ್ಳುತ್ತಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಕೇಸ್ ಸಂಬಂಧ ಇಷ್ಟು ದಿನ ನಟ-ನಟಿಯರ ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಇದೀಗ ಕಾಂಗ್ರೆಸ್ನ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಆರ್.ವಿ.ಯುವರಾಜ್ಗೆ ನೋಟಿಸ್ ಕೊಟ್ಟಿದ್ದಾರೆ. ಈ ಯುವರಾಜ್ ಸುಧಾಮನಗರ ವಾರ್ಡ್ನ ಕಾರ್ಪೋರೇಟರ್. ಅಷ್ಟೇ ಅಲ್ಲ ಬಿಜೆಪಿ ಸಂಸದ ಪಿ.ಸಿ.ಮೋಹನ್ರ ಭಾವಿ ಅಳಿಯ!
ಡ್ರಗ್ಸ್ ದಂಧೆಯಲ್ಲಿ ಯುವರಾಜ್ ಹೆಸರು ಕೇಳಿಬಂದಿದ್ದು, ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಕೆಪಿಸಿಸಿಗೆ ಎದುರಾಗಿದೆ. ಇನ್ನು ಯುವರಾಜ್ ಜತೆ ಪಿ.ಸಿ. ಮೋಹನ್ರ ಮಗಳ ಮದುವೆ ಲಾಕ್ಡೌನ್ ಸಮಯದಲ್ಲೇ ನಿಶ್ಚಯವಾಗಿತ್ತು. ಇದೀಗ ಎರಡೂ ಕುಟುಂಬದಲ್ಲೂ ಆತಂಕ ಮೂಡಿದೆ.
ಯುವರಾಜ್ ಜತೆಗೆ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ಅವರಿಗೂ ಸಿಸಿಬಿ ನೋಟಿಸ್ ನೀಡಿದ್ದು, ಈ ಮೂವರೂ ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಬೇಕಿದೆ.
ಈ ಬಗ್ಗೆ ಮಧ್ಯಾಹ್ನ 2.30ರ ಸುಮಾರಿಗೆ 'ದಿಗ್ವಿಜಯ ನ್ಯೂಸ್' ಜತೆ ಮಾತನಾಡಿದ ಯುವರಾಜ್, 'ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ನಂತರ ಪ್ರತಿಕ್ರಿಯೆ ಕೊಡ್ತೀನಿ' ಎಂದರು. ಆದರೆ, ಹೈದ್ರಾಬಾದ್ನಲ್ಲಿದ್ದ ಅಕುಲ್ಗೆ ವಾಟ್ಸ್ಆ್ಯಪ್ ಮೂಲಕ ಸಿಸಿಬಿ ನೋಟಿಸ್ ತಲುಪಿದ್ದು, ಅವರು ವಿಚಾರಣೆಗೆ ಖಂಡಿತ ಬರುವೆ ಎಂದರು.