

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಶೆ ನಂಟಿನ ಪ್ರಕರಣದಲ್ಲಿ ಹಲವರ ನಂಟಿನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದ್ದು, ಇಂದು ಮತ್ತೆ ಮೂವರಿಗೆ ಸಿಸಿಬಿ ನೋಟಿಸ್ ನೀಡಿದೆ.
ಈಗಾಗಲೇ 'ಮಾದಕ' ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮೊನ್ನೆಯಷ್ಟೇ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್ಗೆ ಸಿಸಿಬಿ ಬುಲಾವ್ ನೀಡಿತ್ತು. ಮೊದಲ ಸುತ್ತಿನ ವಿಚಾರಣೆ ಎದುರಿಸಿರುವ ಗುಳಿಕೆನ್ನೆಯ ಜೋಡಿಗೆ ಮತ್ತೊಮ್ಮೆ ಸಮನ್ಸ್ ಕೊಡುವುದಾಗಿ ಸಿಸಿಬಿ ಪೊಲೀಸರು ಹೇಳಿ ಕಳುಹಿಸಿದ್ದರು. ಇದೀಗ ಕಿರುತೆರೆಯ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಕುಮಾರ್, ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಆರ್.ವಿ. ಯುವರಾಜ್ ಅವರಿಗೆ ನೋಟಿಸ್ ನೀಡಲಾಗಿದೆ. ಇದನ್ನೂ ಓದಿರಿ ಸಿಸಿಬಿ ಕಚೇರಿಗೆ ವಕೀಲರ ಜೊತೆ ಬಂದ ಐಂದ್ರಿತಾ-ದಿಗಂತ್
ಡ್ರಗ್ಸ್ ಮಾಫಿಯಾದ ಜಾಡು ಹಿಡಿದು ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಹಲವರ ಬೆನ್ನಹಿಂದೆ ಬಿದ್ದಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಾಟನ್ಪೇಟೆ ಪ್ರಕರಣದ ಪ್ರಮುಖ ಆರೋಪಿಗಳಾದ ಡ್ರಗ್ಸ್ ಪೆಡ್ಲರ್ಗಳು ವಿಚಾರಣೆ ವೇಳೆ ಮಹತ್ತರದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಈ ಮೇರೆಗೆ ಅಕುಲ್ ಬಾಲಾಜಿ, ಸಂತೋಷ್ ಕುಮಾರ್, ಯುವರಾಜ್ ಆರ್.ವಿ. ಅವರನ್ನೂ ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.