

ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಸಿಬಿ ಪೊಲೀಸರು ಶನಿವಾರ ಕೊರಿಯರ್ ಕಂಪನಿಗಳ ಗೋದಾಮುಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಹೊರರಾಜ್ಯಗಳಿಂದ ಬಂದಿರುವಂತಹ ಪಾರ್ಸಲ್‌ಗಳು ಸೇರಿದಂತೆ ಸ್ಥಳೀಯ ಪಾರ್ಸಲ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು, ಶ್ವಾನದಳದೊಂದಿಗೆ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೂ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜಪೇಟೆ, ಕಲಾಸಿಪಾಳ್ಯ, ಎಸ್‌ಆರ್ ನಗರ, ಮೈಸೂರು ರಸ್ತೆ ಸೇರಿದಂತೆ ೫ ಕೊರಿಯರ್ ಗೋಡೌನ್‌ಗಳ ಮೇಲೆ ದಾಳಿ ಮಾಡಿ ಪಾರ್ಸಲ್‌ಗಳನ್ನು ಪರಿಶೀಲಿಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ವಿದೇಶದಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಹೀಗಾಗಿ, ಒಟ್ಟು ಐದು ಕಡೆ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಹೆಚ್ಚಾಗಿ ಪೂರೈಸುತ್ತಿರುವ ಮಾಹಿತಿ ಇದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್‌ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರಿಯರ್ ಕಚೇರಿ, ಅಂಚೆ ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆ.೯ ರಂದು ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಸಿಸಿಬಿ ಪೊಲೀಸರು ೨೧ ಕೋಟಿ ರೂ. ಮೌಲ್ಯದ ೬೦೬ ಮಾದಕವಸ್ತು ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದರು.