

ಬೆಂಗಳೂರು: ಲಾಕ್ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ದಿನಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿ ಮಾಲೀಕರಿಗೆ ಸಿಸಿಬಿ ಬಿಸಿ ಮುಟ್ಟಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚನೆ ಕೊಟ್ಟರೂ ಕೆಲವರು ದುಪ್ಪಟ್ಟು ಬೆಲೆಗೆ ಮಾರುತ್ತಿರುವ ಆರೋಪ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ನೇತೃತ್ವದ ತಂಡ 120 ದಿನಸಿ ಮಳಿಗೆಗಳ ಮೇಲೆ ಬುಧವಾರ ದಾಳಿ ನಡೆಸಿ ಪರಿಶೀಲಿಸಿ ನಡೆಸಿತು.
ನಿಗದಿತ ಬೆಲೆಗಿಂತ (ಎಂಆರ್ಪಿ) ಅಧಿಕ ಮೊತ್ತಕ್ಕೆ ದಿನಸಿ ಪದಾರ್ಥಗಳನ್ನು ಮಾರುತ್ತಿರುವುದಾಗಿ ಕೆಲವರು ದೂರು ನೀಡಿದ್ದರು. ಅಂಥ ದೂರುಗಳ ಆಧಾರದ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ಹಂತದ ಪರಿಶೀಲನೆ ಆಧರಿಸಿ 5 ಮಳಿಗೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸೇವೆಗಳ ಪೂರೈಕೆ ಇಲಾಖೆಗೂ ವರದಿ ಸಲ್ಲಿಸಲಾಗಿದೆ. ವರದಿ ಆಧರಿಸಿ ಇನ್ನು ಉಳಿದ ಮಳಿಗೆಗಳ ವಿರುದ್ಧ ಹಂತ
ಹಂತವಾಗಿ ಕಾನೂನು ಕ್ರಮ ಜಾರಿಗೊಳ್ಳಲಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಆಹಾರ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಮುಂದಾಗುವ ವ್ಯಾಪಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)