ಬೆಂಗಳೂರು: ಬಿಹಾರದಲ್ಲಿ ಕುಳಿತು ನಗರದಲ್ಲಿ ಮಾದಕವಸ್ತುಗಳ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಅಖಿಲೇಶ್ ಕುಮಾರ್ ಸಿಂಗ್ ಬಂಧಿತ. ಆರೋಪಿಯು ಬಿಹಾರದಲ್ಲಿದ್ದುಕೊಂಡೇ ಬೆಂಗಳೂರಿಗೆ ಹುಡುಗರ ಮೂಲಕ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ತಂಡ ಬಿಹಾರ್‌ಗೆ ತೆರಳಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಈತನನ್ನು ವಿಶೇಷ ಕಾಯ್ದೆ ಅಡಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018 ರಿಂದ ವ್ಯವಸ್ಥತವಾಗಿ ದಂಧೆಯಲ್ಲಿ ಸಕ್ರಿಯವಾಗಿದ್ದ ಆರೋಪಿಯನ್ನು ಪಿಟ್ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧನ ಮಾಡಲಾಗಿದ್ದು, ಈ ಕಾಯ್ದೆಯಡಿಯಲ್ಲಿ ಬಂಧನವಾದರೆ ಒಂದು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಬೇಕಾಗುತ್ತದೆ.
ಆರೋಪಿ ಅಖಿಲೇಶ್ ಹಣದ ಆಮಿಷ ತೋರಿಸಿ 8 ಮಂದಿ ಬಿಹಾರದ ಯುವಕರನ್ನು ಮಾದಕವಸ್ತು ಸರಬರಾಜು ಮಾಡಲು ನೇಮಿಸಿಕೊಂಡಿದ್ದ. ಅವರಿಗೆ ಬಾಗಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಟ್ಟು ತಿಂಗಳಿಗೆ 30 ಸಾವಿರ ರೂ. ಸಂಬಳ ನೀಡುತ್ತಿದ್ದ. ಬಿಹಾರದಿಂದ ಬೆಂಗಳೂರಿಗೆ ಗಾಂಜಾ ಮತ್ತು ಎಂಡಿಎಂಎ ಕಳಿಸುತ್ತಿದ್ದ. ನಂತರ ಬಾಗಲೂರಿನಲ್ಲಿ ಇದ್ದ ಯುವಕರು ಜೋಮ್ಯಾಟೋ, ಸ್ವಿಗ್ಗಿ, ಡನ್ಜೊ ಸಮವಸ್ತ್ರ ಹಾಕಿಕೊಂಡು ಪೊಲೀಸರಿಗೆ ಅನುಮಾನ ಬಾರದಂತೆ ಆಹಾರ ಸರಬರಾಜು ಮಾಡುವ ರೀತಿ ಮಾದಕಗಳನ್ನು ಇಟ್ಟು ಸರಬರಾಜು ಮಾಡುತ್ತಿದ್ದರು. ಯಾರಿಗೆ? ಎಲ್ಲಿಗೆ? ಎಷ್ಟು? ಗಾಂಜಾ ಸರಬರಾಜು ಮಾಡಬೇಕು ಎನ್ನುವ ಮಾಹಿತಿಯನ್ನು ಬಿಹಾರದಿಂದ ನೀಡುತ್ತಿದ್ದ. ಅದರಂತೆ ವ್ಯವಸ್ಥಿತವಾಗಿ ಯುವಕರು ಮಾದಕ ವಸ್ತುಗಳನ್ನು ತಲುಪಿಸುತ್ತಿದ್ದುದ್ದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಆರೋಪಿ ಅಖಿಲೇಶ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. 2018ರಿಂದ ಸಕ್ರಿಯವಾಗಿ ಈ ದಂಧೆಯಲ್ಲಿ ತೊಡಗಿದ್ದನು ಎಂಬುದು ತನಿಖೆಯಿಂದ ಬಯಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.