

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಪೆಡ್ಲರ್ನನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿ ಇದ್ದಾಗಲೇ ಇವನು ಆಕೆಯ ಫ್ಲ್ಯಾಟ್ಗೆ ಹೋಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶ್ರೀನಿವಾಸ್ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ (45) ಬಂಧಿತ. ನಟಿ ರಾಗಿಣಿಯವರ ಯಲಹಂಕದಲ್ಲಿರುವ ಫ್ಲ್ಯಾಟ್ಗೆ ಮೂರು ನಾಲ್ಕು ಬಾರಿ ಭೇಟಿ ಕೊಟ್ಟಿದ್ದ. ಈ ವಿಚಾರವನ್ನು ರಾಗಿಣಿ ಸಿಸಿಬಿ ಪೊಲೀಸರ ಎದುರು ಹೇಳಿದ್ದರು.
ರಾಗಿಣಿ ಹೇಳಿಕೆ ಆಧರಿಸಿ ಇಂದು ಸಿಸಿಬಿ ಅಧಿಕಾರಿಗಳು ಶ್ರೀನಿವಾಸ್ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿರುವ ಮಾದಕ ವಸ್ತುಗಳನ್ನೂ ಜಪ್ತಿ ಮಾಡಿದ್ದಾರೆ. ಆತನನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ.
ಈ ಹಿಂದೆ ಬಂಧಿತ ರವಿಶಂಕರ್ ಮತ್ತು ರಾಗಿಣಿ ನಡುವಿನ ವಾಟ್ಸ್‌ಆ್ಯಪ್ ಚಾಟಿಂಗ್‌ನಲ್ಲಿ ಶ್ರೀ ಎಂದು ಉಲ್ಲೇಖಿಸಲಾಗಿತ್ತು. ರವಿಶಂಕರ್ ಮೊಬೈಲ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿತ್ತು. ಶ್ರೀ ಎಂದರೆ ಯಾರೆಂದು ಸಿಸಿಬಿ ಪೊಲೀಸರು ಕಳೆದ 2 ವಾರಗಳಿಂದ ನಿಗಾ ವಹಿಸಿದ್ದರು. ಕೊನೆಗೂ ಶ್ರೀ ಎಂಬ ವ್ಯಕ್ತಿ ಪತ್ತೆಯಾಗಿದ್ದು, ಈತನ ವಿಚಾರಣೆ ವೇಳೆ ಮತ್ತಷ್ಟು ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಲಿಂಕ್ ಇರುವುದು ಬಹಿರಂಗವಾಗುವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.