

CBSE: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶೀಘ್ರದಲ್ಲೇ ತನ್ನ ವಿದ್ಯಾರ್ಥಿಗಳು, ಹಾಗೂ ಶಿಕ್ಷಕರು ಮತ್ತು ಪಾಲುದಾರರಿಗಾಗಿ ಪ್ರತ್ಯೇಕವಾಗಿ ಸಮುದಾಯ ರೆಡಿಯೋವೊಂದನ್ನು ಪ್ರಾರಂಭಿಸಲಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದ್ದು, ಪರವಾನಗಿ ಪಡೆಯುವ ಅರ್ಜಿಯನ್ನು ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮುದಾಯ ರೆಡಿಯೋ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಿಬಿಎಸ್ಇ ಮಂಡಳಿಯ ಆಡಳಿತ ಮಂಡಳಿಯು ಅನುಮೋದಿಸಿದ್ದು, ಸಮುದಾಯ ರೇಡಿಯೋ ಪರವಾನಗಿಗಾಗಿ ಅರ್ಜಿಯನ್ನು ಸಿದ್ಧಪಡಿಸಿ, ಪ್ರಕ್ರಿಯೆಗೊಳಿಸುವುದನ್ನು ಕುರಿತು, ಮುಂದಿನ ಆರು ತಿಂಗಳಲ್ಲಿ ಪಾಲುದಾರರು ಮತ್ತು ತಜ್ಞರೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು ಎಂದು ನಿರ್ಧರಿಸಿದ್ದಾರೆ. ಹಾಗೆಯೇ ಹಣಕಾಸಿನ ಪರಿಣಾಮಗಳನ್ನು ಸಹ ಪರಿಹರಿಸಲು ಮಂಡಳಿಯು ನಿರ್ಧರಿಸಿದೆ ಎಂದು ಸಿಬಿಎಸ್ಇಯ ಹಿರಿಯ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಜೀವಕಳೆ ತುಂಬಿದ ಮಳೆ – ಬಾಡುತ್ತಿದ್ದ ಬೆಳೆಗಳಿಗೆ ಅನುಕೂಲ
ಸಿಬಿಎಸ್ಇ ಈಗಾಗಲೇ ಶಿಕ್ಷಾ ವಾಣಿ ಎಂಬ ಪಾಡ್ಕ್ಯಾಸ್ಟ್ ಅನ್ನು ನಡೆಸುತ್ತಿದೆ. ಇದು 9 ರಿಂದ12 ನೇ ತರಗತಿಯ ವಿವಿಧ ವಿಷಯಗಳಿಗೆ ಸಕಾಲಿನ ಆಡಿಯೋ ವಿಷಯವನ್ನು ಸ್ಪಷ್ಟ ಹಾಗೂ ಸುಗಮ ರೀತಿಯಲ್ಲಿ ಪ್ರಸಾರ ಮಾಡುತ್ತದೆ. ಇನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಈ ಶಿಕ್ಷಾ ವಾಣಿ ಪ್ಲೇ ಸ್ಟೋರ್ನಲ್ಲಿ ಲಭ್ಯವಾಗುತ್ತದೆ. ಇದು ಸುಮಾರು ಇಲ್ಲಿಯವರೆಗೆ 400 ವಿಷಯಗಳ ತುಣುಕುಗಳನ್ನು ಅಪ್ಲೋಡ್ ಮಾಡಿದೆ.
ಪರವಾನಗಿ ಪಡೆದ ನಂತರ ಸಮುದಾಯ ರೆಡಿಯೋ ಕೇಂದ್ರದಲ್ಲಿ ಪ್ರಸಾರವಾಗುವ ವಿಷಯದ ವಿಧಾನಗಳನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಸಮುದಾಯ ರೆಡಿಯೋ, ಸಾರ್ವಜನಿಕ ರೆಡಿಯೋ, ಹಾಗೂ ವಾಣಿಜ್ಯ ಹಾಗೂ ಪ್ರಸಾರ ರೆಡಿಯೋ ಕೇಂದ್ರಗಳು ವಿಭಿನ್ನವಾಗಿ ಪ್ರಸಾರ ಮಾಡುತ್ತದೆ. ಇನ್ನು ಸಮುದಾಯ ರೆಡಿಯೋ ಕೇಂದ್ರಗಳು ಕಡಿಮೆ ಶಕ್ತಿಯ ರೆಡಿಯೋ ಕೇಂದ್ರಗಳಾಗಿದ್ದು, ಇವುಗಳನ್ನು ಸ್ಥಳೀಯ ಸಮುದಾಯಗಳು ಸ್ಥಾಪಿಸಲು ಮತ್ತು ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದರು.
ಇದು ಸ್ಥಳೀಯ ಸಮುದಾಯದಲ್ಲಿ, ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ವರ್ಗಗಳಲ್ಲಿ, ಆರೋಗ್ಯ, ಪೋಷಣೆ, ಶಿಕ್ಷಣ, ಕೃಷಿ ಇತ್ಯಾದಿ ವಿಷಯಗಳ ಕುರಿತು ಧ್ವನಿ ಎತ್ತಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಇದಲ್ಲದೆ, ಪ್ರಸಾರವು ಸ್ಥಳೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿರುವುದರಿಂದ, ಜನರ ನಡುವೆ ಹೆಚ್ಚಿನ ಸಂಪರ್ಕ ಬೆಳೆಸಲು ಸಹಾಯವಾಗುತ್ತದೆ.
ಇದನ್ನೂ ಓದಿ: ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 540 ಸಮುದಾಯ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳನ್ನು ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಲಾಭರಹಿತ ಸಂಸ್ಥೆಗಳು ನಿರ್ವಹಿಸುತ್ತವೆ. ಭಾರತ ಸರ್ಕಾರವು ವಿವಿಧ ಉಪಕ್ರಮಗಳು ಮತ್ತು ಯೋಜನೆಗಳ ಮೂಲಕ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸಮುದಾಯ ರೇಡಿಯೋದ ಬೆಳವಣಿಗೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. (ಏಜೆನ್ಸೀಸ್)