ನಕಲಿ ಹಾಜರಾತಿ ನೀಡುತ್ತಿದ್ದ ಶಾಲೆಗಳ ಮೇಲೆ ಸಿಬಿಎಸ್‌ಇ ದಾಳಿ: ಬೆಂಗಳೂರಲ್ಲೂ ಇವೆ ಅಂತಹ ಶಾಲೆಗಳು

CBSE
Published on

ನವದೆಹಲಿ (ಪಿಟಿಐ): ದೆಹಲಿ, ಬೆಂಗಳೂರು, ವಾರಾಣಸಿ, ಗುಜರಾತ್ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ನಕಲಿ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುತ್ತಿರುವ ತನ್ನ ವ್ಯಾಪ್ತಿಯ ಶಾಲೆಗಳ ಮೇಲೆ ದಾಳಿ ನಡೆಸಿರುವ ಸೆಂಟ್ರಲ್ ಬೋರ್ಡ್ ಆ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) ತಂಡವು 29 ಶಾಲೆಗಳನ್ನು ಪತ್ತೆ ಹಚ್ಚಿದೆ. ಈ ಸಂಬಂಧ ಮಾನ್ಯತೆ ರದ್ದುಗೊಳಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿ ವೃತ್ತಿ ಶಿಕ್ಷಣಕ್ಕೆ ಬೇರೊಂದು ಕಡೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಜರಾತಿ ನೀಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ದೇಶಾದ್ಯಂತ 29 ತಂಡಗಳು ಬುಧವಾರ ಮತ್ತು ಗುರುವಾರ ತಪಾಸಣೆ ನಡೆಸಿವೆ. ಈ ವೇಳೆ ದೆಹಲಿಯಲ್ಲಿ 18, ಬೆಂಗಳೂರು, ಪಾಟ್ನಾ, ಅಹಮದಾಬಾದ್, ಬಿಲಾಸ್‌ಪುರ, ಛತ್ತೀಸ್‌ಗಢಗಳಲ್ಲಿ ತಲಾ ಎರಡು ಶಾಲೆಗಳು ಪತ್ತೆಯಾಗಿವೆ.

ಈ ಕುರಿತು ಮಾತನಾಡಿರುವ ಸಿಬಿಎಸ್‌ಇ ಕಾರ್ಯದರ್ಶಿ ಹಿಮಾಂಶು ಗುಪ್ತಾ, ಸಿಬಿಎಸ್‌ಇ ಅಧಿಕಾರಿ ಮತ್ತು ಸಂಯೋಜಿತ ಶಾಲೆಯ ಪ್ರಾಂಶುಪಾಲರನ್ನು ಒಳಗೊಂಡ ತಂಡಗಳು ತಪಾಸಣೆ ನಡೆಸಿವೆ. ಪರಿಶೀಲಿಸಲಾದ ಬಹುತೇಕ ಶಾಲೆಗಳು ತಮ್ಮ ವಾಸ್ತವಿಕ ಹಾಜರಾತಿ ದಾಖಲೆಗಳನ್ನು ಮೀರಿ ವಿದ್ಯಾರ್ಥಿಗಳನ್ನು ದಾಖಲಿಸುವ ಮೂಲಕ ಮಂಡಳಿಯ ಮಾನ್ಯತೆಯನ್ನು ಉಲ್ಲಂಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಸರಿಯಾಗಿ ’ಹಾಜರಾಗದಿರುವ’ ದಾಖಲಾತಿಗಳನ್ನು ಸೃಷ್ಟಿಸಿದೆ. ಹಾಗೆಯೇ ಶಾಲೆಗಳು ಮಂಡಳಿಯ ಮೂಲಸೌಕರ್ಯ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಮಂಡಳಿಯು ನಿಯಮ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು,ಸಂಬಂಧಪಟ್ಟ ಶಾಲೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗುತ್ತಿದೆ. ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ನಕಲಿ ಶಾಲೆಗಳಿಗೆ ಪ್ರವೇಶ ಪಡೆಯಲು ಬಯಸುತ್ತಾರೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಳ ಮೇಲೆ ಮಾತ್ರ ಗಮನಹರಿಸುತ್ತಾರೆ. ತರಗತಿಗಳಿಗೆ ಹಾಜರಾಗದೆ ನೇರವಾಗಿ ಮಂಡಳಿ ಪರೀಕ್ಷೆಗಳಿಗೆ ಮಾತ್ರ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ.

ಕೆಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಲಭ್ಯವಿರುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿನ ಕೋಟಾವನ್ನು ಗಮನದಲ್ಲಿಟ್ಟುಕೊಂಡು ಆಕಾಂಕ್ಷಿಗಳು ನಕಲಿ ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಉದಾಹರಣೆಗೆ ದೆಹಲಿಯಲ್ಲಿ 11 ಮತ್ತು 12ನೇ ತರಗತಿಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ದೆಹಲಿ ರಾಜ್ಯ ಕೋಟಾದ ಅಡಿಯಲ್ಲಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಪರಿಗಣಿಸಲಾಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net