ಸಿಬಿಎಸ್​ಇ ಪರೀಕ್ಷೆ ಮೇಲೆ ದೆಹಲಿ ಹಿಂಸಾಚಾರದ ಪರಿಣಾಮ; ಫೆ.27ರಂದು ನಡೆಯಬೇಕಿದ್ದ ಇಂಗ್ಲಿಷ್​ ಪರೀಕ್ಷೆ 80 ಕೇಂದ್ರಗಳಲ್ಲಿ ಮುಂದೂಡಿಕೆ

CBSE 26 eb 20
Published on

ಈಶಾನ್ಯ ದೆಹಲಿ ಹಿಂಸಾಚಾರ ಸಿಬಿಎಸ್​ಇ ಪರೀಕ್ಷೆಗಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಫೆ.27 (ನಾಳೆ) ನಡೆಯಬೇಕಿದ್ದ ಸಿಬಿಎಸ್​ಇ 12ನೇ ತರಗತಿಯ ಇಂಗ್ಲಿಷ್ ಪರೀಕ್ಷೆಗಳನ್ನು ದೆಹಲಿಯ 80 ಕೇಂದ್ರಗಳಲ್ಲಿ ಮುಂದೂಡಲಾಗಿದೆ.

ಕಳೆದ ಮೂರು ದಿನಗಳಿಂದಲೂ ಈಶಾನ್ಯ ದೆಹಲಿ ಹಾಗೂ ಪೂರ್ವ ದೆಹಲಿಯ ಕೆಲವು ಭಾಗಗಳಲ್ಲಿ ಸಿಎಎ ಸಂಬಂಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪ್ರಕ್ಷುಬ್ದ ವಾತಾವರಣ ಉಂಟಾಗಿದೆ. ಯಾರೂ ಹೊರಬೀಳದಂತ ಪರಿಸ್ಥಿತಿ ಎದುರಾಗಿದೆ.

ಇಂದು ಕೂಡ ಪರೀಕ್ಷೆಯಿತ್ತು. ಆದರೆ ಫೆ.25ರಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅದನ್ನು ಮುಂದೂಡಿ ನೋಟಿಸ್ ಹೊರಡಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಫೆ.27ರಂದು ನಡೆಯಬೇಕಿದ್ದ ಇಂಗ್ಲಿಷ್​ ಪರೀಕ್ಷೆಯನ್ನು ಈಶಾನ್ಯ ದೆಹಲಿಯ 73 ಹಾಗೂ ಪೂರ್ವ ದೆಹಲಿಯ 7 ಕೇಂದ್ರಗಳಲ್ಲಿ ಮುಂದೂಡಿದೆ.

ವಿದ್ಯಾರ್ಥಿಗಳಿಗೆ, ಪರೀಕ್ಷಾ ಸಿಬ್ಬಂದಿಗೆ, ಪಾಲಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೆಹಲಿ ಸರ್ಕಾರ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿತ್ತು. ಹಾಗಾಗಿ ಕೇಂದ್ರೀಯ ಪೌಢ ಶಿಕ್ಷಣ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಿಬಿಎಸ್ಇ ಕಾರ್ಯದರ್ಶಿ ಅನುರಾಗ್​ ತ್ರಿಪಾಠಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net