ಸಿಬಿಎಸ್​ಇ ಪರೀಕ್ಷೆ ರದ್ದತಿ: ಸುಪ್ರೀಂಕೋರ್ಟ್​ ಹೇಳಿದ್ದೇನು?

exam
Published on

ನವದೆಹಲಿ: ಸಿಬಿಎಸ್​ಇಯ 10 ಮತ್ತು 12 ನೇ ತರಗತಿಗಳಿಗೆ ಬಾಕಿ ಇರುವ ಪರೀಕ್ಷೆಗಳನ್ನು ರದ್ದುಪಡಿಸಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸುವ ಕುರಿತು ಪರಿಶೀಲಿಸುವಂತೆ ಸುಪ್ರೀಂಕೋರ್ಟ್​ ಆದೇಶಿಸಿದೆ.

ಈ ಬಗೆಗಿನ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಮುಂದಿನ ಮಂಗಳವಾರದ ಒಳಗೆ ಮಾಹಿತಿ ನೀಡುವಂತೆ ಕೋರ್ಟ್​ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ನಿರ್ದೇಶಿಸಿದೆ.

ಈಗಾಗಲೇ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಉಳಿದ ಪರೀಕ್ಷೆಗಳನ್ನು ನಡೆಸದಂತೆ ಕೋರಿ ಅಮಿತ್ ಬಾತ್ಲಾ ಸೇರಿದಂತೆ ಅನೇಕ ಮಂದಿ ಪಾಲಕರು ಅರ್ಜಿ ಸಲ್ಲಿಸಿದ್ದರು. ಜುಲೈ 1 ರಿಂದ ಜುಲೈ 15 ರ ನಡುವೆ ಉಳಿದ ಪತ್ರಿಕೆಗಳಿಗೆ ಪರೀಕ್ಷೆಗಳನ್ನು ನಡೆಸಲು ಸಿಬಿಎಸ್‌ಇ ಯೋಜಿಸಿದ್ದು ಇದನ್ನು ರದ್ದುಗೊಳಿಸಲು ಆದೇಶಿಸುವಂತೆ ಅವರು ಕೋರಿದ್ದರು.

ಈಗಾಗಲೇ ನಡೆಸಿರುವ ಪರೀಕ್ಷೆಯ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲು ಮತ್ತು ಉಳಿದ ವಿಷಯಗಳ ಆಂತರಿಕ ಮೌಲ್ಯಮಾಪನ ಅಂಕಗಳೊಂದಿಗೆ ಸರಾಸರಿ ಲೆಕ್ಕಾಚಾರ ಮಾಡಲು ಸಿಬಿಎಸ್‌ಇಗೆ ನಿರ್ದೇಶಿಸುವಂತೆ ಅವರು ಕೋರಿದ್ದರು.

ಇದೇ ರೀತಿ ಲಕ್ಷಾಂತರ ಪಾಲಕರು ಮನವಿ ಸಲ್ಲಿಸುತ್ತಿರುವುದು ವಿಚಾರಣೆ ವೇಳೆ ಕೋರ್ಟ್​ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ಮಾಡುವಂತೆ ನಿರ್ದೇಶಿಸಿದೆ. ಸದ್ಯ ಯಾವುದೇ ಅಂತಿಮ ತೀರ್ಪನ್ನು ಪ್ರಕಟಿಸದ ಕೋರ್ಟ್​, ಮಂಡಳಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯಪೀಠ ನಡೆಸುತ್ತಿದ್ದು, ವಿಚಾರಣೆಯನ್ನು ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net