ಹಾಥರಸ್​ ಗ್ಯಾಂಗ್​ ರೇಪ್​ ಪ್ರಕರಣದ ತನಿಖೆ ಸಿಬಿಐಗೆ; ಕೇಂದ್ರದಿಂದ ಅಧಿಸೂಚನೆ

CBI
Published on

ಲಖನೌ: ಹಾಥರಸ್​​ ಗ್ಯಾಂಗ್​ರೇಪ್​ ತನಿಖೆ ನಡೆಸಿ ಎಂದು ವಾರದ ಹಿಂದೆಯೇ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ಮನವಿ ಮಾಡಿದ್ದರೂ ಇದುವರೆಗೂ ತನಿಖಾ ದಳ ಅದಕ್ಕೆ ಉತ್ತರಿಸಿರಲಿಲ್ಲ. ಎಫ್​ಐಆರ್ ಕೂಡ ದಾಖಲಿಸಿರಲಿಲ್ಲ.

ಆದರೆ ಇದೀಗ ಹಾಥರಸ್​ ರೇಪ್​ ಕೇಸ್​ ತನಿಖೆ ಕೈಗೆತ್ತಿಕೊಳ್ಳುವುದು ಸಿಬಿಐಗೆ ಅನಿವಾರ್ಯವಾಗಿದೆ. ಕಾರಣ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಹಾಥರಸ್​​ನ ಬೂ​ಲ್ಗರಿ ಗ್ರಾಮದಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಚಾರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​ ಸಿಗುತ್ತಿದೆ. ಸದ್ಯ ಎಸ್​ಐಟಿ ತನಿಖೆ ನಡೆಸುತ್ತಿದೆ. ವಾರದ ಹಿಂದೆಯೇ ಮುಖ್ಯಮಂತ್ರಿ ಆದಿತ್ಯನಾಥ್​ ಅವರು ಸಿಬಿಐಗೆ ಪತ್ರ ಬರೆದಿದ್ದರು. ಹಾಗೇ ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆದಿದ್ದರು. ಇದೀಗ ಕೇಂದ್ರ ಸರ್ಕಾರ ಸಿಬಿಐಗೆ, ತನಿಖೆ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ತನ್ನದೇ ಶ್ರದ್ಧಾಂಜಲಿ ಪೋಸ್ಟರ್​ಗಳನ್ನು ನೋಡಿ ಕಕ್ಕಾಬಿಕ್ಕಿಯಾದ ಮಹಿಳೆ; ಪತಿಯ ಕುಟುಂಬದ ವಿರುದ್ಧ ದೂರು

ಲಖನೌ ವಲಯದಡಿ ಕಾರ್ಯನಿರ್ವಹಿಸುವ ಸಿಬಿಐನ ಘಾಜಿಯಾಬಾದ್​ ಬ್ರ್ಯಾಂಚ್​​ನ ತಂಡ ಹಾಥರಸ್​ ರೇಪ್​ ಕೇಸ್ ತನಿಖೆ ಕೈಗೆತ್ತಿಕೊಳ್ಳಲಿದೆ. ಸದ್ಯ ನಾಲ್ವರೂ ಆರೋಪಿಗಳೂ ಪೊಲೀಸ್ ಕಸ್ಟಡಿಯಲ್ಲಿದ್ದು, ಯುವತಿಯ ಮೇಲೆ ನಾವು ಅತ್ಯಾಚಾರ ಮಾಡಿಲ್ಲ. ಆಕೆಯನ್ನು ಹತ್ಯೆ ಮಾಡಿದ್ದು ಅವಳ ತಾಯಿ-ಅಣ್ಣ ಎಂದು ಹೇಳಿದ್ದಾರೆ.

ಇಷ್ಟು ದಿನ ತನಿಖೆ ನಡೆಸಿದ್ದ ಎಸ್‌ಐಟಿ ತಂಡ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸಂತ್ರಸ್ತೆಯ ಕುಟುಂಬ ಹಾಗೂ ಗ್ರಾಮಸ್ಥರ ಹೇಳಿಕೆಗಳಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯಲ್ಲಿ ಘಟನೆಯನ್ನು ಮರುಸೃಷ್ಟಿ ಮಾಡಲು ಯೋಜನೆ ರೂಪಿಸುತ್ತಿತ್ತು. ಈಗ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿರುವುದರಿಂದ ಎಸ್‌ಐಟಿ ತಂಡ ತನ್ನ ತನಿಖೆಯ ವರದಿಯನ್ನು ಸಿಬಿಐಗೆ ಹಸ್ತಾಂತರಿಸಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ! ಯಾವ್ಯಾವ ಭಾಗದಲ್ಲಿ? ಇಲ್ಲಿದೆ ಮಾಹಿತಿ…

ಈ ನಡುವೆ ಆರೋಪಿಗಳ ಪರ ವಾದ ಮಂಡಿಸುವುದಾಗಿ ಘೋಷಿಸಿದ್ದ ವಕೀಲ ಎ.ಪಿ.ಸಿಂಗ್, ಶನಿವಾರ ಹಾಥರಸ್‌ಗೆ ಭೇಟಿ ನೀಡಿ ಆರೋಪಿಗಳ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. 2012ರ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದ ಸಿಂಗ್, ಹಾಥರಸ್ ಪ್ರಕರಣದ ಆರೋಪಿಗಳನ್ನು ರಕ್ಷಿಸುವುದಾಗಿ  ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net