'ಮಾಣಿಕ್ಯ' ನಟಿಗೆ ತಪ್ಪದ ಕಂಟಕ! 'ಚಿನ್ನ'ದ ಬೆಡಗಿ ನಿವಾಸಕ್ಕೆ CBI ಎಂಟ್ರಿ, ಮದುವೆ ವಿಡಿಯೋ, ಗಿಫ್ಟ್​... | Ranya Rao

Ranya Rao
Published on

Ranya Rao: 14 ಕೆಜಿ ಚಿನ್ನದ ಬಿಸ್ಕೆಟ್​ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಡಿ ಬಂಧಿತರಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್​, ಸದ್ಯ 15 ದಿನಗಳ ನ್ಯಾಯಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ತನಿಖೆಯನ್ನು ಸಿಐಡಿಗೂ ಒಪ್ಪಿಸಲಾಗಿದ್ದು, ಪ್ರಸ್ತುತ ಸಿಬಿಐ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಚಿನ್ನ ಸಾಗಾಣಿಕೆಯಲ್ಲಿ ನಟಿಗೆ ಪ್ರಭಾವಿ ರಾಜಕಾರಣಿಗಳ ಜತೆ ಸಂಪರ್ಕವಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ-ಪ್ರತ್ಯಾರೋಪಗಳು ಭುಗಿಲೆದ್ದಿವೆ. ಇದೆಲ್ಲದರ ಮಧ್ಯೆ ನಿನ್ನೆ (ಮಾ.10) ಮೂರು ದಿನಗಳ ಡಿಆರ್​ಐ ಕಸ್ಟಡಿ ಅವಧಿ ಮುಗಿದ ನಂತರ ನಟಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರನ್ಯಾ ರಾವ್ ವಿಚಾರಣೆ ನಡೆಸಿದ ಕೋರ್ಟ್​, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇದೀಗ ಚಿನ್ನ ಕಳ್ಳಸಾಗಣೆಯ ಆಳ-ಆಗಲ ತಿಳಿಯಲು ಪ್ರಕರಣಕ್ಕೆ ಸಿಬಿಐ ಎಂಟ್ರಿಕೊಟ್ಟಿದೆ.

Ranya Ramachandra Rao

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದೇ ತಡ ಸಿಬಿಐ ಅಧಿಕಾರಿಗಳು ನಟಿ ರನ್ಯಾ ರಾವ್ ಅವರಿದ್ದ ಐಷಾರಾಮಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ತನಿಖೆಯ ಭಾಗವಾಗಿ ಆಗಮಿಸಿರುವ ಅಧಿಕಾರಿಗಳು, ರನ್ಯಾ ಉಳಿದಿದ್ದ ನಿವಾಸ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಕಚೇರಿ ಮತ್ತು ಆಕೆ ಮದುವೆಯಾದ ಹೋಟೆಲ್‌ಗೆ ತೆರಳಿ ದಾಖಲೆ ಪರಿಶೀಲನೆಗೆ ಮುಂದಾಗಿದ್ದಾರೆ. ತನಿಖೆಯಲ್ಲಿ ಒಂದು ಸುಳಿವು ಸಿಕ್ಕರೂ ಅದು ಸಿಬಿಐ ತನಿಖೆಗೆ ಹೊಸ ತಿರುವು ನೀಡಲಿದೆ. ಇದೇ ಉದ್ದೇಶದಲ್ಲಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ರನ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣಗಳ ವಿಡಿಯೋ ತುಣುಕು, ಫೋಟೋ ಮತ್ತು ನಟಿಯ ಮದುವೆಗೆ ಆಗಮಿಸಿದ್ದ ಅತಿಥಿಗಳ ಪಟ್ಟಿಗಳನ್ನು ಸಿಬಿಐ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಾರ್ಯಕ್ರಮಕ್ಕೆ ಹಾಜರಾದವರು ಯಾರಾರು? ಮದುವೆ ಹೆಸರಿನಲ್ಲಿ ರನ್ಯಾಗೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟವರಾರು? ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಸಲಿಗೆ ರನ್ಯಾ ಹಿಂದಿರುವ ಕಾಣದ ಕೈಗಳು ಯಾರದ್ದು? ನಟಿಯ ಜತೆಗೆ ದೊಡ್ಡವರಾ ಕೈವಾಡ ಅಡಗಿದೆಯೇ ಎಂಬ ಪ್ರಶ್ನೆಗಳು ಸದ್ಯ ಸಿಬಿಐ ಮುಂದಿದೆ. ಇದೆಲ್ಲವನ್ನೂ ತನಿಖೆಯಲ್ಲಿ ಬಹಿರಂಗಪಡಿಸಲು ಅಧಿಕಾರಿಗಳು ಪಣತೊಟ್ಟಿದ್ದಾರೆ.

ವಿಚಾರಣೆ ನಾಳೆ ಮುಂದೂಡಿಕೆ

ಈ ಮಧ್ಯೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ರನ್ಯಾ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯುತ್ತಿದೆ. ವಿಚಾರಣೆಗೆ ಮುಂಚಿತವಾಗಿ ಡಿಆರ್​ಐ ತನಿಖಾ ಅಧಿಕಾರಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಜಾಮೀನು ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರ್ಟ್​ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅಂತೆಯೇ ಇಂದಿನ ವಿಚಾರಣೆಯ ಸಂದರ್ಭದಲ್ಲಿ ಡಿಆರ್‌ಐನ ಕಾನೂನು ತಂಡವು ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿದೆ. ತನಿಖಾಧಿಕಾರಿ ನಾಗೇಶ್ವರ್​ ರಾವ್​ ಅವರಿಂದ ಆಕ್ಷೇಪಣೆ ಸಲ್ಲಿಸಲಾಯಿತು. ಸದ್ಯ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ನಾಳೆಗೆ ಮುಂದೂಡಿದೆ.

ಏನಿದು ಪ್ರಕರಣ?

ಮಾ.03ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ನಟಿ ರನ್ಯಾ ರಾವ್​ ಅವ​ರಿಂದ 14.56 ಕೋಟಿ ರೂ. ಮೌಲ್ಯದ 14 ಕೆಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡ ಪೊಲೀಸರು, ಕೆಲವೇ ಕ್ಷಣದಲ್ಲಿ ನಟಿಯನ್ನು ಬಂಧಿಸಿ, ತನಿಖೆಗೆ ಒಳಪಡಿಸಿದರು. ಒಂದೇ ವರ್ಷದಲ್ಲಿ 27 ಬಾರಿ ದುಬೈಗೆ ಭೇಟಿ ನೀಡಿದ್ದ ಚೆಲುವೆ, 14.2 ಕೆಜಿ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ಚಿನ್ನವನ್ನು ಹೇಗೆ ಸಾಗಿಸುತ್ತಿದ್ದರು? ಇಂಥಾ ಕೆಲಸಕ್ಕೆ ‘ಮಾಣಿಕ್ಯ’ ನಟಿ ಕೈಹಾಕಿದ್ದೇಕೆ? ಎಂಬ ಗೊಂದಲ ಹಲವರಲ್ಲಿ ಮೂಡಿದೆ. ಸದ್ಯ ಇದಕ್ಕೆ ಉತ್ತರ ಹುಡುಕುತ್ತಿರುವ ಖಾಕಿ ಪಡೆ, ಪಾತ್ರಧಾರಿ ಹಿಂದಿರುವ ಸೂತ್ರಧಾರಿಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net