

ನವದೆಹಲಿ: ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮಾಹಿತಿ ಹಕ್ಕು ಕಾನೂನು (ಆರ್ಟಿಐ) ವ್ಯಾಪ್ತಿಯಿಂದ ಪೂರ್ಣವಾಗಿ ವಿನಾಯಿತಿಯಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳ ಮಾಹಿತಿಯನ್ನು ಒದಗಿಸಲು ಪಾರದರ್ಶಕತೆ ಕಾನೂನು ಸಿಬಿಐಗೆ ಅನುಮತಿ ನೀಡುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕೆಲವು ನಿರ್ದಿಷ್ಟ ಸಂಸ್ಥೆಗಳಿಗೆ ಕಾನೂನು ಅನ್ವಯವಾಗುವುದಿಲ್ಲ ಎನ್ನುವ ಆರ್ಟಿಐ ಕಾನೂನಿನ 24ನೇ ಸೆಕ್ಷನ್ ಉಲ್ಲೇಖಿಸಿದ ಕೋರ್ಟ್, ಈ ವಿಚಾರದಲ್ಲಿ ಕಾನೂನಿನ ಎರಡನೇ ಶೆಡ್ಯೂಲ್ನಲ್ಲಿ ಸಿಬಿಐ ಹೆಸರು ನಮೂದಾಗಿದ್ದರೂ ಇಂಥ ಸಂಸ್ಥೆಗಳಿಗೆ ಇಡೀ ಕಾನೂನು ಅನ್ವಯವಾಗದೆಂದು ಅರ್ಥವಲ್ಲ ಎಂದು ಸ್ಪಷ್ಟಪಡಿಸಿದೆ. ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅರ್ಜಿದಾರರಿಗೆ ಒದಗಿಸಬಹುದೆಂದು ಸೆಕ್ಷನ್ 24ರ ನಿಯಮ ಹೇಳುತ್ತದೆ. ಅದನ್ನು ಎರಡನೇ ಶೆಡ್ಯೂಲ್ನಲ್ಲಿ ನಮೂದಿಸಿದ ವಿನಾಯಿತಿ ವಿಭಾಗದಲ್ಲಿ ಸೇರಿಸಲಾಗದು ಎಂದು ಜನವರಿ 30ರ ಆದೇಶದಲ್ಲಿ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಹೇಳಿದ್ದಾರೆ.
ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಅಧಿಕಾರಿ ಸಂಜೀವ್ ಚತುರ್ವೆದಿ ಅವರಿಗೆ ಕೆಲವು ಮಾಹಿತಿಯನ್ನು ಒದಗಿಸುವಂತೆ ಸಿಬಿಐಗೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) 2019ರ ನವೆಂಬರ್ನಲ್ಲಿ ಸೂಚಿಸಿದ್ದನ್ನು ಪ್ರಶ್ನಿಸಿ ತನಿಖಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತನ್ನ ನಿಲುವನ್ನು ವಿವರಿಸಿದೆ.