

ಕೊಚ್ಚಿ: ಚಿನ್ನ ಕಳ್ಳಸಾಗಣೆ ಕೇಸ್ನ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕಸ್ಟಡಿ ವಿಸ್ತರಣೆ ಕೋರಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ವಡಕ್ಕನ್ಚೇರಿಯ ಲೈಫ್ ಮಿಶನ್ ಪ್ರಾಜೆಕ್ಟ್ನ ಅವ್ಯವಹಾರಕ್ಕೆ ಸಂಬಂಧಿಸಿ ಸ್ವಪ್ನಾಳನ್ನೂ ವಿಚಾರಣೆಗೆ ಒಳಪಡಿಸಲು ಸಿಬಿಐ ತೀರ್ಮಾನಿಸಿದೆ.
ಈ ಕೇಸ್ನಲ್ಲಿ ಯುನಿಟಕ್ ಬಿಲ್ಡರ್ಸ್ನ ಮಾಲೀಕ ಸಂತೋಷ್ ಈಪನ್ ಮೊದಲ ಆರೋಪಿ. ಸ್ವಪ್ನಾ ಕೂಡ ಇದರಲ್ಲಿ ಭಾಗಿಯಾಗಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯಗಳು ದೊರಕಿದ ಕಾರಣ ಆಕೆಯನ್ನೂ ವಿಚಾರಣೆಗೊಳಪಡಿಸುವುದಕ್ಕಾಗಿ ಸಿಬಿಐ ಕಸ್ಟಡಿ ವಿಸ್ತರಣೆ ಕೋರಿದೆ.
ಮೂಲಗಳ ಪ್ರಕಾರ, ಸ್ವಪ್ನಾ ಅಲ್ಲದೆ, ಗೋಲ್ಡ್ ಸ್ಮಗ್ಲಿಂಗ್ ಕೇಸ್ನ ಇನ್ನೊಬ್ಬ ಆರೋಪಿ ಪಿ.ಎಸ್.ಸರಿತ್ ನ ಕಸ್ಟಡಿ ವಿಸ್ತರಣೆಗೂ ಸಿಬಿಐ ಅರ್ಜಿ ಸಲ್ಲಿಸಿದೆ. ಈ ಹಿಂದೆ ಸ್ವಪ್ನಾ ನೀಡಿದ ಹೇಳಿಕೆ ಪ್ರಕಾರ, ಆಕೆ ಈ ಪ್ರಾಜೆಕ್ಟ್ನಲ್ಲಿ 1 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ. ಲೈಫ್ ಮಿಷನ್ ಮತ್ತು ಯುಎಇ ಮೂಲದ ರೆಡ್ ಕ್ರೆಸೆಂಟ್ ನಡುವೆ ಈ ಸಂಬಂಧ ಒಪ್ಪಂದ ಏರ್ಪಟ್ಟಿದ್ದು, ಬಿಲ್ಡರ್ ಸಂತೋಷ್ ಈಪನ್ ಅನ್ನು ಲೈಫ್ ಮಿಷನ್ ಆಯ್ಕೆ ಮಾಡಿದೆ. ಈ ಅವ್ಯವಹಾರ ಕುರಿತು ಸಿಬಿಐ ವಿಸ್ತೃತ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)