

ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಕರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ಮಾತು ವ್ಯಾಪಕವಾಗಿದೆ. ನಿಜವಾಗಿಯೂ ಈ ವೈರಸ್ ಗಾಳಿಯಲ್ಲಿ ಹರಡುತ್ತಾ? ಹೌದು ಎನ್ನುವುದಾದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ನಮ್ಮ ದೇಶದಲ್ಲೇ ಅಧ್ಯಯನವೊಂದು ಶುರುವಾಗಿದೆ.
ಸಿಎಸ್ಐಆರ್ ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮಾಲಿಕ್ಯುಲಾರ್ ಬಯೋಲಜಿ (ಸಿಸಿಎಂಬಿ) ಈ ಅಧ್ಯಯನವನ್ನು ಶುರುಮಾಡಿದೆ. ಆಸ್ಪತ್ರೆ ವಾತಾವರಣದಲ್ಲಿ ವೈರಸ್ ಗಾಳಿಯಲ್ಲಿ ಹರಡುವುದೇ ಎಂಬುದು ಅಧ್ಯಯನದ ವಿಚಾರ. ವೈರಸ್ ಸೋಂಕಿತ ವ್ಯಕ್ತಿಯಿಂದ ಇದು ಗಾಳಿಯಲ್ಲಿ ಇನ್ನೊಬ್ಬನಿಗೆ ತಲುಪುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?, ಗಾಳಿಯಲ್ಲಿ ಎಷ್ಟು ಹೊತ್ತು ಇರುತ್ತದೆ? ಎಷ್ಟು ದೂರ ಸಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೂ ಇದರಲ್ಲಿ ಒಳಗೊಂಡಿದೆ. 200ಕ್ಕೂ ಹೆಚ್ಚು ಸೈಂಟಿಸ್ಟ್ಗಳು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗೆ ಪತ್ರ ಬರೆದು ಕರೊನಾ ವೈರಸ್ ವಾಯುವಿನಲ್ಲೂ ಹರಡಬಲ್ಲುದು ಎಂಬುದು ಸಾಬೀತಾಗಿದೆ ಎಂದು ಹೇಳಿದ ಎರಡು ತಿಂಗಳ ನಂತರ ಈ ಅಧ್ಯಯನ ಶುರುವಾಗಿದೆ.
ಇದನ್ನೂ ಓದಿ: ಮಾತೃಭಾಷೆ ಕಲಿಕೆಯಿಂದಲೇ ಮಕ್ಕಳ ವಿಷಯ ಗ್ರಹಿಕೆ ಸಾಧ್ಯ
ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳುವ ಪ್ರಕಾರ, ಹತ್ತು ದಿನಗಳ ಹಿಂದೆಯೇ ಈ ಅಧ್ಯಯನ ಶುರುವಾಗಿದೆ. ಆರೋಗ್ಯ ಸೇವಾ ಸಿಬ್ಬಂದಿಗೆ ನೆರವಾಗುವ ಉದ್ದೇಶದಿಂದ ಈ ಅಧ್ಯಯನ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಯ ವಾತಾವರಣದಲ್ಲಿ ಬೇರೆ ಬೇರೆ ಐಸಿಯುಗಳು ಅಥವಾ ಕೋವಿಡ್ 19 ವಾರ್ಡ್, ರೋಗಿಗಳಿಂದ ಎರಡು,ನಾಲ್ಕು, ಎಂಟು ಮೀಟರ್ ದೂರದ ವ್ಯಾಪ್ತಿಯನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ಗಾಳಿಯಲ್ಲಿ ವೈರಸ್ ಅರ್ಧ ಗಂಟೆ ಅಥವಾ 10 ನಿಮಿಷವೋ ಎಷ್ಟು ಹೊತ್ತು ಇರುತ್ತದೆ ಎಂಬುದರ ಅಧ್ಯಯನವೂ ನಡೆಯುತ್ತದೆ. (ಏಜೆನ್ಸೀಸ್)