ಕೆರೆ-ಕಟ್ಟೆಗಳಿಗೆ ಕಾವೇರಿ ನೀರು ತುಂಬಿಸಿ

29 HANUR 1
Published on

ಹನೂರು : ತಾಲೂಕಿನ ಮೂಲಕ ಹರಿದು ತಮಿಳುನಾಡಿನ ಮೆಟ್ಟೂರು ಜಲಾಶಯ ತಲುಪಿ ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿರುವ ಕಾವೇರಿ ನದಿ ನೀರನ್ನು ತಾಲೂಕಿನ ಜಲಾಶಯ ಹಾಗೂ ಕೆರೆಗಳಿಗೆ ತುಂಬಿಸುವಂತೆ ಜನರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿಯೇ ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿರುವ ಹನೂರು ತಾಲೂಕು ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ಇಲ್ಲಿನ ಹೆಚ್ಚಿನ ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಕೆಲವು ವರ್ಷಗಳಲ್ಲಿ ಮಳೆಯಾಗದ ಕಾರಣ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ಇತ್ತ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಕೆರೆ-ಕಟ್ಟೆ, ಹಳ್ಳಕೊಳ್ಳ ಹಾಗೂ ಚೆಕ್ ಡ್ಯಾಂಗಳು ಬತ್ತಿ ಹೋಗುತ್ತವೆ. ಇದರಿಂದ ಅಂತರ್ಜಲ ಮಟ್ಟ ಕುಸಿತದಿಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ಈ ವೇಳೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಭಟನೆಗಳು ನಡೆಯುವುದು ಸಾಮಾನ್ಯವಾಗಿದೆ.

ಹನೂರು ತಾಲೂಕಿನಲ್ಲಿ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಲಾಗುತ್ತಿದೆ. ಆದರೆ, ಉದ್ದನೂರು ಸಮೀಪದ ಹುಬ್ಬೆಹುಣಸೆ, ಮಂಗಲ ಬಳಿಯ ರಾಮನಗುಡ್ಡೆ ಡ್ಯಾಂಗೆ ನೀರು ತುಂಬಿಸಬೇಕಿದೆ. ಜತೆಗೆ ಅಜ್ಜೀಪುರದ ಉಡುತೊರೆ, ಹೂಗ್ಯಂನ ಯರಂಬಾಡಿ, ಕೀರೆಪಾತಿ ಇತರ ಜಲಾಶಯಗಳಿಗೂ ನೀರು ತುಂಬಿಸುವಂತೆ ಒತ್ತಾಯ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net