ಸಂಪಾದಕೀಯ | ಎಚ್ಚರಿಕೆಯ ಹೆಜ್ಜೆ ಅಗತ್ಯ

ಸಂಪಾದಕೀಯ
ಸಂಪಾದಕೀಯ
Published on
ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ಮರುಜಾರಿ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ಆರಂಭಿಸಿದೆ. ಈ ವಿಷಯವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಖಚಿತಪಡಿಸಿದ್ದಾರೆ. ಕಾಂಗ್ರೆಸ್​ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ತಮಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಅದರನ್ವಯ ಮರುಜಾರಿಯ ಸಾಧಕಬಾಧಕ ಪರಿಶೀಲನೆಗೆ ಸದ್ಯದಲ್ಲೇ ಸಮಿತಿಯೊಂದನ್ರು ರಚಿಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 
ವಿದ್ಯಾರ್ಥಿ ಸಂಘಗಳ ಚುನಾವಣೆ ಮತ್ತೆ ಶುರು ಆಗುವುದರಿಂದ ರಾಜ್ಯದಲ್ಲಿ ಯುವನಾಯಕತ್ವ ಬೆಳೆಸಲು ಸಾಧ್ಯವಾಗುತ್ತದೆ ಎಂಬುದು ಅವರ ವಾದ.

ಈ ಚುನಾವಣೆಗಳಿಗೆ 1989ರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿಷೇಧ ಹೇರಿತ್ತು. ಮರುಜಾರಿಗೆ ಸಿದ್ಧವಾಗಿರುವ ಈಗಿನ ಸರ್ಕಾರ, ಆ ಕಾಲದಲ್ಲಿ ನಿಷೇಧಕ್ಕೆ ಕಾರಣವಾಗಿದ್ದ ಆತಂಕಕಾರಿ ಇತಿಹಾಸವನ್ನೊಮ್ಮೆ ಹಿಂತಿರುಗಿ ನೋಡಬೇಕಿದೆ. 1980ರ ದಶಕದಲ್ಲಿ ವಿದ್ಯಾರ್ಥಿ ಸಂಘಗಳು ಕೇವಲ ಪ್ರತಿನಿಧಿತ್ವದ ವೇದಿಕೆಗಳಾಗಿ ಉಳಿದಿರಲಿಲ್ಲ.

ರಾಜಕೀಯ ಪಕ್ಷಗಳು, ಜಾತಿ-ಧರ್ಮದ ಗುಂಪುಗಳಾಗಿ ಮಾರ್ಪಟ್ಟಿದ್ದವು. ತಮ್ಮ ಪ್ರಭಾವ ಹೆಚ್ಜಿಸಿಕೊಳ್ಳುವುದಕ್ಕಾಗಿ ಕಾಲೇಜು ಕ್ಯಾಂಪಸ್​ಗಳನ್ನು ರಣರಂಗವಾಗಿ ಮಾಡುವುದಕ್ಕೂ ಅವು ಹಿಂಜರಿಯುತ್ತಿರಲಿಲ್ಲ. ಹಿಂಸಾಚಾರ ಸರ್ವೆಸಾಮಾನ್ಯವಾಗಿತ್ತು. ಆಸ್ತಿಪಾಸ್ತಿ ಹಾನಿಗೆ ಒಳಗಾಗುತ್ತಿತ್ತು. ಇದರಿಂದ ತರಗತಿಗಳಿಗೆ ಅಡ್ಡಿಯಾಗುತ್ತಿದ್ದುದು ಮಾತ್ರವಲ್ಲದೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಕಾಲೇಜಿನ ಕ್ಯಾಂಪಸ್ ಅಸುರಕ್ಷಿತ ತಾಣವಾಗಿತ್ತು. ಬೆಂಗಳೂರು ಮತ್ತು ಇತರೆಡೆಯ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ವಾತಾವರಣ ಪೂರ್ತಿ ಕಲುಷಿತಗೊಂಡಿತ್ತು. ಶಿಕ್ಷಣವೇ ನೇಪಥ್ಯಕ್ಕೆ ಸರಿದು, ಹೋರಾಟಗಳು ಮುಂಚೂಣಿಗೆ ಬಂದಿದ್ದವು.

ಇನ್ನೂ ಹೆಚ್ಚು ಆತಂಕಕಾರಿ ವಿಷಯವೆಂದರೆ ಆ ಕಾಲದ ವಿದ್ಯಾರ್ಥಿ ನಾಯಕರು ಅಪರಾಧಿ ಜಾಲಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ರಾಜಕೀಯ ನಾಯಕರ ಚುನಾವಣಾ ಪ್ರಚಾರಕ್ಕೆ ಬಳಕೆಯಾಗುತ್ತಿದ್ದರು. ಅನಿವಾರ್ಯ ಸಂದರ್ಭಗಳಲ್ಲಿ ಆ ನಾಯಕರಿಗೆ ‘ಗುರಾಣಿ’ಯಾಗಿ ಕೆಲಸ ಮಾಡುತ್ತಿದ್ದರು. ಇದ್ಯಾವುದೂ ಗುಟ್ಟಾಗಿ ನಡೆಯುತ್ತಿರಲಿಲ್ಲ. ರಾಜಾರೋಷವಾಗಿಯೇ ನಡೆಯುತ್ತಿತ್ತು. ಇದಕ್ಕೆ ಪ್ರತಿಯಾಗಿ ಕಾಲೇಜು ಚುನಾವಣೆಗಳಲ್ಲಿ ತಮ್ಮ ಬೆಂಬಲಿಗ ವಿದ್ಯಾರ್ಥಿ ನಾಯಕರಿಗೆ ರಾಜಕೀಯ ಮುಖಂಡರು ಹಣದ ರೂಪದಲ್ಲಿ ಬೆಂಬಲ ನೀಡುತ್ತಿದ್ದರು. 

ರಾಜಕಾರಣಿಗಳು, ಅಪರಾಧಿಗಳು ಮತ್ತು ವಿದ್ಯಾರ್ಥಿ ನಾಯಕರ ಮಧ್ಯೆ ಅಪವಿತ್ರ ಸಂಬಂಧ ಏರ್ಪಟ್ಟಿತ್ತು. ಇದು ಸಮಾಜದ ಮೇಲೂ ಕೆಲವೊಮ್ಮೆ ದುಷ್ಪರಿಣಾಮ ಬೀರುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ಅಂದಿನ ಸರ್ಕಾರ ವಿದ್ಯಾರ್ಥಿ ಚುನಾವಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಈಗ ಇದೆಲ್ಲವನ್ನೂ ಪ್ರಸಕ್ತ ಸರ್ಕಾರ ಒಮ್ಮೆ ನೆನಪಿಸಿಕೊಳ್ಳುವುದು ಒಳಿತು. ಆದರೆ, ಕಾಲೇಜು ಚುನಾವಣೆಗಳಲ್ಲಿ ಎಲ್ಲವೂ ಋಣಾತ್ಮಕವಾಗಿಯೇ ಇತ್ತು ಎಂದು ಹೇಳಲಾಗುವುದಿಲ್ಲ. ಅಲ್ಲಿಂದಲೇ ಹಲವು ಮಹತ್ವದ, ದೂರದೃಷ್ಟಿಯ ನಾಯಕರೂ ಹೊರಹೊಮ್ಮಿದ್ದಾರೆ. 

ವಿದ್ಯಾರ್ಥಿ ಚುನಾವಣೆಗಳು ಸಮಾಜದ ಬಗೆಗಿನ ಜವಾಬ್ದಾರಿಯನ್ನೂ ಕಲಿಸಬಲ್ಲವು. ತರಗತಿಯ ಉಪನ್ಯಾಸಗಳು ನೀಡಲಾರದ ಕೌಶಲ್ಯಗಳನ್ನೂ ಇವು ವಿದ್ಯಾರ್ಥಿಗಳಿಗೆ ಕಲಿಸಬಲ್ಲವು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net