

ಚಿತ್ರದುರ್ಗ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತೊಂದು ಲಾರಿಗೆ ಡಿಕ್ಕಿಯಾಗಿ 7 ದನಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ.
ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಆರ್ ಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದಿಂದ ಕೋಲಾರ ಕಡೆಗೆ ದನಗಳನ್ನು ತುಂಬಿಕೊಂಡು ಹೋಗುತ್ತಿದ್ದ ಇಚಾರ್ ಲಾರಿ ಮತ್ತೊಂದು ಲಾರಿಗೆ ಡಿಕ್ಕಿಯಾಗಿದೆ. ಈ ರಭಸಕ್ಕೆ ಲಾರಿಯಲ್ಲಿದ್ದ 10 ದನಗಳಲ್ಲಿ 7 ದನಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ.
ಲಾರಿಯಲ್ಲಿದ್ದ ದನಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎರಡು ಲಾರಿಗಳ ಡ್ರೈವರ್ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.